ಮುಂಬೈನಲ್ಲಿರುವ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಭೇಟಿ ನೀಡಿದ್ದರು. ಆಗಸ್ಟ್ 31 (ಇಂದು) ಮತ್ತು ಸೆಪ್ಟಂಬರ್ 1 ರಂದು (ನಾಳೆ) ನಿಗದಿಪಡಿಸಲಾದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ವೇಳೆ ಬ್ಯಾನರ್ಜಿ ಅವರು ಮುಂಬೈನ ಜುಹುವಿನಲ್ಲಿರುವ ಬಚ್ಚನ್ ಅವರ ನಿವಾಸಕ್ಕೆ ತೆರಳಿ ಬಿಗ್ ಬಿ ಕುಟುಂಬವನ್ನು ಭೇಟಿಯಾದರು.
ಬಚ್ಚನ್ ಮತ್ತು ಅವರ ಕುಟುಂಬ ಸದಸ್ಯರನ್ನು ಭೇಟಿಯಾದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಕೋಲ್ಕತ್ತಾಗೆ ಭೇಟಿ ನೀಡುವಂತೆ ನಟನನ್ನು ಆಹ್ವಾನಿಸಿರುವುದಾಗಿ ತಿಳಿಸಿದರು. "ಅಮಿತ್ ಜಿ ನಮ್ಮ ಭಾರತ ರತ್ನ. ಅವರ ಕುಟುಂಬವು ಚಿತ್ರರಂಗಕ್ಕೆ ದೊಡ್ಡ ಕೊಡುಗೆ ನೀಡಿದೆ. ಇಂದು ನಾನು ಅಮಿತ್ ಜಿಗೆ ರಾಕಿ ಕಟ್ಟಿದ್ದೇನೆ. ಇಂದು ದೊಡ್ಡ ದಿನವಾಗಿದೆ" ಎಂದು ಹೇಳಿದರು.
'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಮಮತಾ ಬ್ಯಾನರ್ಜಿ, "ಇಂಡಿಯಾವೇ ಪ್ರಧಾನಿ ಮುಖ (India will be our PM face). ದೇಶವನ್ನು ಉಳಿಸುವುದೇ ನಮ್ಮ ಪ್ರಾಥಮಿಕ ಕಾಳಜಿ" ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಇಸ್ರೋ ವಿಜ್ಞಾನಿಗಳಿಗೆ ರಕ್ಷಾಬಂಧನದ ಶುಭಾಶಯ ಕೋರಿದರು.
ಕಳೆದ ವರ್ಷ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಬಚ್ಚನ್ ಭಾಗವಹಿಸಿದ್ದರು. ಈ ವೇಳೆ ಬ್ಯಾನರ್ಜಿ ಅವರು ಬಿಗ್ ಬಿ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನವನ್ನು ನೀಡಬೇಕೆಂದು ಒತ್ತಾಯಿಸಿದ್ದರು.
ಇದನ್ನೂ ಓದಿ:ನರೇಂದ್ರ ಮೋದಿ ಬಯೋಪಿಕ್: ಮೋದಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ?
ಲೋಕಸಭೆ ಚುನಾವಣೆಗೆ ಅಭಿಷೇಕ್ ಸ್ಪರ್ಧೆ ಸಾಧ್ಯತೆ: ಈಗಾಗಲೇ ಅಮಿತಾಭ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಅವರು ಚುನಾವಣಾ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಚರ್ಚೆಗಳು ಕೇಳಿಬರುತ್ತಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಪ್ರಯಾಗ್ರಾಜ್ (Allahabad) ಕ್ಷೇತ್ರದಿಂದ ಸಮಾಜವಾದಿ ಪಕ್ಷದ (ಎಸ್‌ಪಿ) ಮೂಲಕ ಸ್ಪರ್ಧಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.
1984ರಲ್ಲಿ ಅಮಿತಾಭ್ ಬಚ್ಚನ್ ಅವರು ಕಾಂಗ್ರೆಸ್‌ನ ಪಕ್ಷದಿಂದ ಟಿಕೆಟ್ ಪಡೆದು ಪ್ರಯಾಗ್ರಾಜ್ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಲೋಕದಳ ನಾಯಕ ಹೇಮಾವತಿ ನಂದನ್ ಬಹುಗುಣ ಅವರನ್ನು 1,09,000 ಮತಗಳ ಅಂತರದಿಂದ ಸೋಲಿಸಿದ್ದರು. ಪ್ರಸ್ತುತ, ಅಭಿಷೇಕ್ ಬಚ್ಚನ್ ತಾಯಿ ಜಯಾ ಬಚ್ಚನ್ ಸಮಾಜವಾದಿ ಪಕ್ಷದಿಂದ ರಾಜ್ಯಸಭಾ ಸಂಸದರು. ಹಾಗಾಗಿ ಅಭಿಷೇಕ್ ಬಚ್ಚನ್ ಅವರು ಲೋಕಸಭೆ ಚುನಾವಣೆಯಲ್ಲಿ ಪ್ರಯಾಗ್‌ರಾಜ್‌ನಿಂದಲೇ ಸ್ಪರ್ಧಿಸಬಹುದು ಎಂದು ಸಮಾಜವಾದಿ ಪಕ್ಷದ ಮೂಲಗಳು ಈಗಾಗಲೇ ತಿಳಿಸಿವೆ.
ಅಲ್ಲದೇ ಭಾರತೀಯ ಜನತಾ ಪಕ್ಷದ ಸಂಸದೆ ರೀಟಾ ಬಹುಗುಣ ಜೋಶಿ ಅವರ ಪುತ್ರ ಮಯಾಂಕ್ ಜೋಶಿ ಅವರು ಸಮಾಜವಾದಿ ಪಕ್ಷಕ್ಕೆ ಸೇರಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರೀಟಾ ಬಹುಗುಣ ಜೋಶಿ ಬಿಜೆಪಿ ಮೂಲಕ ಪ್ರಯಾಗ್‌ರಾಜ್‌ನಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಈ ಸಂದರ್ಭದಲ್ಲಿ ಪ್ರಯಾಗ್‌ರಾಜ್‌ನ ಟಿಕೆಟ್ ಹಂಚಿಕೆ ಹೇಗಿರುತ್ತದೆ ಎಂಬುದು ಕುತೂಹಲ ಸೃಷ್ಟಿಸಿದೆ. ಇದರ ನಡುವೆ ಅಭಿಷೇಕ್ ಬಚ್ಚನ್ ಅವರೇ ಈ ಕ್ಷೇತ್ರದ ಭವಿಷ್ಯದ ಅಭ್ಯರ್ಥಿ ಎಂದು ಸಮಾಜವಾದಿ ಪಕ್ಷದಿಂದ ಗುಸುಗುಸು ಕೇಳಿಬರುತ್ತಿದೆ.
ಇದನ್ನೂ ಓದಿ:ಏರಿಕೆ ಕಾಣದ 'ಘೂಮರ್' ಕಲೆಕ್ಷನ್: ಅಭಿಷೇಕ್ ಬಚ್ಚನ್ ಸಿನಿಮಾಗೆ ಹಿನ್ನೆಡೆ!