ಕೋಯಿಕ್ಕೋಡ್ (ಕೇರಳ): ಮಲಯಾಳಂ ಹಾಸ್ಯನಟ ಮಾಮುಕ್ಕೋಯ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಹೃದಯಾಘಾತದಿಂದ ಅವರನ್ನು ಕೋಯಿಕ್ಕೋಡ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅವರು ಕೊನೆಯುಸಿರೆಳೆದಿದ್ದಾರೆ. ಹೃದಯಾಘಾತದ ಜೊತೆಗೆ ಮಿದುಳಿನ ರಕ್ತಸ್ರಾವವೂ ಆಗಿತ್ತು ಎಂಬುದು ತಿಳಿದುಬಂದಿದೆ.
ಮಲಪ್ಪುರಂನ ಕಾಳಿಕಾವು ಎಂಬಲ್ಲಿ ಸೋಮವಾರ ರಾತ್ರಿ (24.04.23) ಮಾಮುಕ್ಕೋಯ ಹೃದಯಾಘಾತಕ್ಕೆ ಒಳಗಾಗಿದ್ದರು. ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಲು ನಟ ಕಾಳಿಕಾವು ಪೂಂಗೊಡೆಗೆ ಬಂದಿದ್ದರು. ಕಾರ್ಯಕ್ರಮ ಆರಂಭವಾಗುವ ಮುನ್ನವೇ ಕುಸಿದು ಬಿದ್ದಿದ್ದರು. ಅನೇಕ ಹಾಸ್ಯ ಪಾತ್ರಗಳ ಮೂಲಕ ಮಲಯಾಳಿಗಳನ್ನು ನಗಿಸಿದ ಮಾಮುಕ್ಕೋಯ ಜನಪ್ರಿಯ ಹಾಸ್ಯನಟ. ತಮ್ಮ 44 ವರ್ಷಗಳ ನಟನಾ ವೃತ್ತಿಯಲ್ಲಿ ಮಲಯಾಳಂ ಚಿತ್ರರಂಗಕ್ಕೆ 450ಕ್ಕೂ ಹೆಚ್ಚು ಪಾತ್ರಗಳನ್ನು ನೀಡಿದ್ದಾರೆ. ರಾಜ್ಯ ಸರ್ಕಾರದ ಅತ್ಯುತ್ತಮ ಹಾಸ್ಯನಟ ಪ್ರಶಸ್ತಿ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಮಾಮುಕೋಯ ಅವರು ನಾಟಕದ ಮೂಲಕ ಮಲಯಾಳಂ ಚಿತ್ರರಂಗ ಪ್ರವೇಶಿಸಿದರು. ಅವರು ಜುಲೈ 5, 1946 ರಂದು ಮೊಹಮ್ಮದ್ ಮತ್ತು ಆಯೇಷಾ ದಂಪತಿಗಳಿಗೆ ಕೋಯಿಕ್ಕೋಡ್ ಜಿಲ್ಲೆಯ ಚಲಿಕಂಡಿಯಲ್ಲಿ ಜನಿಸಿದರು. ಒಬ್ಬ ಸಹೋದರನೂ (ಕೋಯಕುಟ್ಟಿ) ಇದ್ದಾನೆ. ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕೋಯಿಕ್ಕೋಡ್‌ನ ಎಂಎಂ ಹೈಸ್ಕೂಲ್‌ನಲ್ಲಿ ಮಾಡಿದರು. ಸುಹಾ ಜೀವನ ಸಂಗಾತಿ. ನಾಲ್ಕು ಮಕ್ಕಳಿದ್ದಾರೆ. ಮುಹಮ್ಮದ್ ನಿಸಾರ್, ಶಾಹಿತಾ, ನದಿಯಾ ಮತ್ತು ಅಬ್ದುಲ್ ರಶೀದ್ ಕೋಝಿಕ್ಕೋಡ್ನಲ್ಲಿ ವಾಸಿಸುತ್ತಿದ್ದಾರೆ.
ಮೇರುನಟ ಮಮ್ಮುಟ್ಟಿಗೆ ಮಾತೃ ವಿಯೋಗ: ಇತ್ತೀಚೆಗಷ್ಟೇಸೌತ್ ಸಿನಿ ರಂಗದ ಸೂಪರ್ ಸ್ಟಾರ್ ಮಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fathima Ismail) (ಏಪ್ರಿಲ್ 21-2023) ಮೃತಪಟ್ಟರು. ತಾಯಿ ನಿಧನದ ಹಿನ್ನೆಲೆ ಮಮ್ಮುಟ್ಟಿ ಕುಟುಂಬ ಶೋಕ ಸಾಗರದಲ್ಲಿ ಮುಳುಗಿತ್ತು.