ಎರ್ನಾಕುಲಂ (ಕೇರಳ): ಮಲೆಯಾಳಂ ಚಿತ್ರರಂಗದ ಕಿರುತೆರೆ, ಹಿರಿತೆರೆಯಲ್ಲಿ ಗುರುತಿಸಿಕೊಂಡಿದ್ದ ನಟಿ ಸುಬಿ ಸುರೇಶ್ ಇಂದು ಕೊನೆಯುಸಿರೆಳೆದಿ. ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ನಟಿ ಸುಬಿ ಸುರೇಶ್ ಎರ್ನಾಕುಲಂ ಜಿಲ್ಲೆಯ ಆಲುವ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. 41 ವರ್ಷ ವಯಸ್ಸಿನ ಈ ನಟಿ ಕಳೆದ ಕೆಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇಂದು ಬೆಳಗ್ಗೆ 9:30ಕ್ಕೆ ಮೃತಪಟ್ಟಿದ್ದಾರೆ.
ಹದಗೆಟ್ಟ ಆರೋಗ್ಯ:ಸುಬಿ ಸುರೇಶ್ ಮಲಯಾಳಂ ಸಿನಿರಂಗದಲ್ಲಿ ನಟಿ, ನಿರೂಪಕಿಯಾಗಿ ಗುರುತಿಸಿಕೊಂಡಿದ್ದರು. ಮನೋರಂಜನಾ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಆದ್ರೆ ಕಳೆದ ಎರಡು ವಾರಗಳಿಂದ ಲಿವರ್ ಸಂಬಂಧಿ ಕಾಯಿಲೆಯಿಂದ ತೀವ್ರವಾಗಿ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಯಕೃತ್ತಿನ ಕಸಿ ಮಾಡಲು ಪ್ರಯತ್ನಿಸಲಾಗಿತ್ತು. ಯಕೃತ್ತಿನ ದಾನಿ ಕೂಡ ಪತ್ತೆಯಾಗಿದ್ದರು. ಆದರೆ ಕಳೆದ ದಿನ ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ವೆಂಟಿಲೇಟರ್ಗೆ ಹಾಕಲಾಗಿತ್ತು. ಆದ್ರಿಂದು ಅವರು ವಿಧಿವಶರಾಗಿದ್ದಾರೆ.
ಜಾಂಡೀಸ್ ಬಳಿಕ ಯಕೃತ್ತು ಸಮಸ್ಯೆ: ಜನವರಿ 28ರಂದು ಜಾಂಡೀಸ್‌ಗೆ ಚಿಕಿತ್ಸೆ ಪಡೆದಿದ್ದ ಸುಬಿ ಸುರೇಶ್ ಅವರಿಗೆ ಯಕೃತ್ತು ಸಂಬಂಧಿ ಕಾಯಿಲೆ ಇರುವುದು ಪತ್ತೆಯಾಗಿತ್ತು. ಅಷ್ಟರಲ್ಲಾಗಲೇ ಯಕೃತ್ತಿನ ಕಾಯಿಲೆ ಗಂಭೀರವಾಗಿತ್ತು. ಲಿವರ್ ಕಸಿ ಮಾಡಿ ಅವರನ್ನು ಬದುಕಿಸುವ ಪ್ರಯತ್ನ ಕೂಡ ವಿಫಲವಾಯಿತು.
ಸುಬಿ ಸುರೇಶ್ ವೃತ್ತಿ ಜೀವನ: ಕೊಚ್ಚಿ ಕಲಾ ಭವನದ ಮೂಲಕ ಸುಬಿ ಸುರೇಶ್ ಕಲಾ ಕ್ಷೇತ್ರದಲ್ಲಿ ಸಕ್ರಿಯರಾದರು. ಮಿಮಿಕ್ರಿ, ಕಾಮಿಡಿ ಕ್ಷೇತ್ರದಲ್ಲಿ ಮಿಂಚಿದ್ದ ಸುಬಿ ಸುರೇಶ್ ಕಿರುತೆರೆ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಯೂಟ್ಯೂಬ್ ಚಾನಲ್‌ನಲ್ಲಿ ಕೂಡ ಸಕ್ರಿಯರಾಗಿದ್ದರು. ಸಿನಿಮಾಲಾ ಎಂಬ ಹಾಸ್ಯ ಕಾರ್ಯಕ್ರಮದ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದರು. 'ಕುಟ್ಟಿಪಟ್ಟಾಳಂ' ಎಂಬ ಚಿಕ್ಕ ಮಕ್ಕಳ ಕಾರ್ಯಕ್ರಮದ ಮೂಲಕ ಪ್ರೇಕ್ಷಕರ ಗಮನ ಸೆಳೆದಿದ್ದರು.