ಹೈದರಾಬಾದ್ :ಮಲಯಾಳಂ ನಟಿ ಅನಿಕಾ ವಿಜಯಿ ವಿಕ್ರಮನ್ ತಮ್ಮ ಮಾಜಿ ಪ್ರಿಯಕರ ಹಲ್ಲೆ ಮಾಡಿರುವ ಹಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಮಾಜಿ ಪ್ರಿಯಕರ ಅನೂಪ್ ಪಿಳ್ಳೈ ಹಲ್ಲೆ ಮಾಡಿರುವ ಪೋಟೊಗಳನ್ನು ಅನಿಕಾ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಾಕಿದ್ದು, ಇದರಲ್ಲಿ ಮೂಗು, ಕಣ್ಣುಗಳಿಗೆ ಗಂಭೀರ ಗಾಯವಾಗಿರುವುದು ಕಂಡುಬಂದಿದೆ.
ಈ ಘಟನೆಗಳ ಹೊರತಾಗಿ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆ ಕರೆಗಳು ಬರುತ್ತಿದೆ. ಅಲ್ಲದೇ ನನ್ನನ್ನು ಮತ್ತು ನನ್ನ ಕುಟುಂಬವನ್ನು ನಿರಂತರವಾಗಿ ಅವಮಾನಿಸಲಾಗುತ್ತಿದೆ. ನಾನು ನನ್ನ ಮಾಜಿ ಪ್ರಿಯಕರ ಹಲ್ಲೆ ಮಾಡುವುದಕ್ಕೆ ಮೊದಲು ನಾನು ತೆಗೆದ ಕೊನೆಯ ಚಿತ್ರವನ್ನು ನಿಮಗೆ ತೋರಿಸುತ್ತಿದ್ದೇನೆ. ಇದರಲ್ಲಿ ನಾನು ನನ್ನ ಹೇರ್ ಸ್ಟೈಲ್ ತೋರಿಸಲು ತುಂಬಾ ಉತ್ಸುಕನಾಗಿದ್ದೆ. ಅದು ಈಗ ಹಳೆಯದಾಗಿದೆ ಎಂದು ಹೇಳಿದ್ದಾರೆ. ಇನ್ನು ಈ ವಾರದಿಂದ ನಾನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲು ಶುರು ಮಾಡುತ್ತೇನೆ ಎಂದು ಬರೆದಿದ್ದಾರೆ.
ನಟಿ ಫೋಟೊ ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಪೋಸ್ಟ್ ವೈರಲ್ ಆಗಿದ್ದು, ನಟಿಯ ಮೇಲೆ ಆಗಿರುವ ಹಲ್ಲೆಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ನಟಿಯ ಬೆಂಬಲಕ್ಕೆ ಮಲಯಾಳಂ ಚಿತ್ರರಂಗ ಮತ್ತು ಅಭಿಮಾನಿಗಳು ನಿಂತಿದ್ದಾರೆ. ಅಭಿಮಾನಿಯೋರ್ವರು ನಟಿಯ ಬೆಂಬಲಕ್ಕೆ ನಿಂತಿದ್ದು, ನಾನು ನಿಮ್ಮ ಪೋಸ್ಟ್‌ಗಳ ಬಗ್ಗೆ ಎಂದಿಗೂ ಕಾಮೆಂಟ್ ಮಾಡಿಲ್ಲ. ನಾನು ಯುಎಸ್ಎನಿಂದ ಬಂದಿದ್ದೇನೆ ಮತ್ತು ನಾನು ವೃತ್ತಿಪರ ಛಾಯಾಗ್ರಾಹಕನಾಗಿದ್ದೇನೆ. ನಾನು ನೋಡಿದ ಅತ್ಯಂತ ಸುಂದರವಾದ ವ್ಯಕ್ತಿಗಳಲ್ಲಿ ನೀವು ಒಬ್ಬರು. ಆದರೆ ನಿಮ್ಮ ಮೇಲೆ ಹಲ್ಲೆ ನಡೆದಿರುವುದು ತುಂಬ ದುಃಖವನ್ನುಂಟು ಮಾಡಿದೆ. ನಿಮ್ಮಂತಹ ಉತ್ತಮ ಮನಸ್ಸುಳ್ಳವರಿಗೆ ಈ ರೀತಿ ಮಾಡಲು ಮನಸ್ಸಾದರೂ ಹೇಗೆ ಬಂತು. ನಾನು ನಿಮಗಾಗಿ ಪ್ರಾರ್ಥಿಸುತ್ತಿದ್ದೇನೆ ಎಂದರು.