ಕೊಲ್ಲಂ(ಕೇರಳ): ಮಲಯಾಳಂ ಚಿತ್ರರಂಗದ ಖ್ಯಾತ ನಟ ಕುಂಡರ ಜಾನಿ ಮಂಗಳವಾರ ನಿಧನರಾಗಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು. ಮಂಗಳವಾರ ಸಂಜೆ ಹೃದಯಾಘಾತ ಉಂಟಾಗಿ ಅವರನ್ನು ಕೊಲ್ಲಂನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಾನಿ ಮೃತಪಟ್ಟಿದ್ದಾರೆ.
ಜಾನಿ 1952ರಲ್ಲಿ ಕೊಲ್ಲಂ ಜಿಲ್ಲೆಯ ಕುಂಡರಾದಲ್ಲಿ ಜನಿಸಿದ್ದರು. ತಂದೆ ಜೋಸೆಫ್, ತಾಯಿ ಕ್ಯಾಥರೀನ್. ಜಾನಿ ತಮ್ಮ ವಿದ್ಯಾಭ್ಯಾಸವನ್ನು ಫಾತಿಮಾ ಮಾತಾ ಕಾಲೇಜು ಮತ್ತು ಕೊಲ್ಲಂನ ನಾರಾಯಣ ಕಾಲೇಜಿನಲ್ಲಿ ಪೂರೈಸಿದ್ದರು. ಕ್ರೀಡೆ ಬಗ್ಗೆ ಅಪಾರ ಆಸಕ್ತಿಯನ್ನು ಹೊಂದಿದ್ದ ಇವರು ಕಾಲೇಜು ವ್ಯಾಸಂಗ ಮಾಡುವ ಸಂದರ್ಭದಲ್ಲಿ ಜಿಲ್ಲಾ ಫುಟ್ಬಾಲ್ ತಂಡದ ನಾಯಕರಾಗಿದ್ದರು. ಬಳಿಕ ಡಾ. ಸ್ಟೆಲ್ಲಾ ಅವರನ್ನು ಮದುವೆಯಾಗಿದ್ದರು.
ನಾಲ್ಕು ದಶಕಗಳ ವೃತ್ತಿ ಜೀವನ :ಜಾನಿ ತಮ್ಮ ಸಿನಿಮಾ ವೃತ್ತಿ ಜೀವನವನ್ನು 1979ರಲ್ಲಿ ಆರಂಭಿಸಿದರು. ಇವರು ಐವಿ ಸಸಿ ಅವರ ನಿರ್ದೇಶನದಲ್ಲೇ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಇತ್ತೀಚೆಗೆ ಖ್ಯಾತ ನಟ ಉಣ್ಣಿ ಮುಕುಂದನ್ ಅಭಿನಯದ ಮೆಪ್ಪಡಿಯನ್ ಚಿತ್ರದಲ್ಲಿ ಕೊನೆಯದಾಗಿ ನಟಿಸಿದ್ದರು. ಈ ಸಿನಿಮಾ 2022 ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನವನ್ನು ಕಂಡಿತ್ತು. ಕಿರೀಡಮ್, ಚೆಂಗೋಲ್, ಮೆಪ್ಪಡಿಯನ್ ಇವರ ಹಿಟ್ ಚಿತ್ರಗಳಾಗಿವೆ. ನಾಲ್ಕು ದಶಕಗಳ ವೃತ್ತಿ ಜೀವನದಲ್ಲಿ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವುದು ಇವರ ಸಾಧನೆಯಾಗಿದೆ. ತಮ್ಮ ವೃತ್ತಿ ಜೀವನದಲ್ಲಿ ಖಳನಾಯಕ ಮತ್ತು ಪೊಲೀಸ್ ಪಾತ್ರಗಳಲ್ಲಿ ಪ್ರಮುಖವಾಗಿ ಮಿಂಚಿದ್ದರು. ಅಷ್ಟೇ ಅಲ್ಲದೇ ಯಾವುದೇ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬಲ್ಲ ಸಾಮರ್ಥ್ಯವನ್ನು ಜಾನಿ ಹೊಂದಿದ್ದರು.
500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಜಾನಿ :ನಟ ಕುಂಡರ ಜಾನಿ ತಮ್ಮ ವಿಭಿನ್ನ ನಟನೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿದ್ದ ಕುಂಡರ ಜಾನಿ, ತಮ್ಮ ವಿಲನ್ ಪಾತ್ರಗಳಿಂದ ಜನಪ್ರಿಯರಾಗಿದ್ದರು. ಕಿರ್ಯಾತಂ ಮತ್ತು ಗಾಡ್ ಫಾದರ್ ಸಿನಿಮಾಗಳು ನಟನಿಗೆ ಯಶಸ್ಸನ್ನು ತಂದುಕೊಟ್ಟಿತ್ತು. ಇವರು ಮಲಯಾಳಂ ಸಿನಿಮಾಗಳಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು, ಕನ್ನಡ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಮಾಲಿವುಡ್ಸೂಪರ್ ಸ್ಟಾರ್ ಮೋಹನ್ ಲಾಲ್ ಅಭಿನಯದ ಕಿರ್ಯಾತಂ ಮತ್ತು ಚೆಂಗೋಲ್ ಸಿನಿಮಾಗಳು ಜಾನಿ ಸಿನಿಮಾ ವೃತ್ತಿ ಜೀವನದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದ್ದವು. ಜಾನಿ ಅಪಾರ ಸಿನಿ ರಸಿಕರನ್ನು ತೆರೆ ಮೇಲೆ ರಂಜಿಸಿ ನೆನಪುಗಳನ್ನು ಬಿಟ್ಟು ನಮ್ಮನ್ನಗಲಿ ಹೋಗಿದ್ದಾರೆ.
ಇದನ್ನೂ ಓದಿ :ಸುಮುಖಗೆ ಹಿಮಾಲಯದಲ್ಲಿ ಅಪ್ಪು ನಗುವಿನ ದರ್ಶನ; ಭಾವುಕರಾದ ನಟ