'ಕೆಜಿಎಫ್' ಬಳಿಕ ಇಡೀ ಭಾರತೀಯ ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ ಚಿತ್ರ 'ಸಲಾರ್'. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಸಿನಿಮಾವನ್ನು 'ಕೆಜಿಎಫ್' ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ. 'ಸಲಾರ್ ಪಾರ್ಟ್ 1'ರ ಟೀಸರ್ ಈಗಾಗಲೇ ಬಿಡುಗಡೆಯಾಗಿದೆ. ಜುಲೈ 6ರ ಮುಂಜಾನೆ 05:12ಕ್ಕೆ ಗ್ಲಿಂಪ್ಸ್ ರಿಲೀಸ್ ಆಗಿದೆ. ಭರ್ಜರಿ ಆ್ಯಕ್ಷನ್ ದೃಶ್ಯಗಳು ಮತ್ತು ಪವರ್‌ಫುಲ್ ಸಂಭಾಷಣೆಗಳಿಂದ ಕೂಡಿರುವ ಈ ಟೀಸರ್, ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಹೌದು. 'ಕೆಜಿಎಫ್' ಮೂಲಕ ಇಡೀ ದೇಶವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ್ದ ಪ್ರಶಾಂತ್ ನೀಲ್, ಈ ಬಾರಿ 'ಸಲಾರ್' ಮೂಲಕ ಮತ್ತೊಂದು ಹೊಸ ಪ್ರಪಂಚವನ್ನೇ ಸೃಷ್ಟಿಸಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಈವರೆಗೂ ಕಂಡು ಕೇಳರಿಯದಷ್ಟರ ಮಟ್ಟಿಗೆ ಚಿತ್ರ ನಿರ್ಮಾಣವಾಗಿದೆ. ಟೀಸರ್ ಬಿಡುಗಡೆಯಾದ 24 ಗಂಟೆಯಲ್ಲಿ 90 ಮಿಲಿಯನ್ ವೀಕ್ಷಣೆಗಳನ್ನು ದಾಟಿತ್ತು. ಸದ್ಯ ಯೂಟ್ಯೂಬ್ನಲ್ಲಿ ಟೀಸರ್ ವೀಕ್ಷಿಸಿದವರ ಸಂಖ್ಯೆ 100 ಮಿಲಿಯನ್ಗೂ ಹೆಚ್ಚಿದೆ. ಈ ಮೂಲಕ ಸಲಾರ್ ಹೊಸ ದಾಖಲೆಯನ್ನು ಕ್ರಿಯೇಟ್ ಮಾಡಿದೆ.
ಹೊಂಬಾಳೆ ಫಿಲ್ಮ್ಸ್ ಟ್ವೀಟ್:ಟೀಸರ್ ವೀಕ್ಷಿಸಿದ ಸಿನಿ ಪ್ರೇಕ್ಷಕರಿಗೆ ಕೃತಜ್ಞತೆ ಹೇಳುವುದರ ಜೊತೆಗೆ ಹೊಂಬಾಳೆ ಫಿಲ್ಮ್ಸ್, 'ಸಲಾರ್' ಚಿತ್ರದ ಬಗ್ಗೆ ಮತ್ತೊಂದು ಅಪ್ಡೇಟ್ ನೀಡಿದೆ. "ಹೃದಯ ತುಂಬಿದ ಧನ್ಯವಾದಗಳು! ತಮ್ಮೆಲ್ಲರ ಪ್ರೀತಿಯ ಅಭಿಮಾನದ ಪ್ರೋತ್ಸಾಹಕ್ಕೆ ನಾವು ಆಭಾರಿ. ಭಾರತೀಯ ಸಿನಿಮಾ ಸಾಮರ್ಥ್ಯದ ಸಂಕೇತವಾಗಿ ಹೊರಹೊಮ್ಮಿರುವ ಸಲಾರ್ ಕ್ರಾಂತಿಗೆ ಮುನ್ನುಡಿಯಾಗಿ ಚಿತ್ರಪ್ರೇಮಿಗಳಿಂದ ದೊರಕಿದ ಪ್ರೀತಿಪೂರ್ವಕ ಬೆಂಬಲದಿಂದ ನಮ್ಮ ಮನತುಂಬಿದೆ. ಭಾರತೀಯ ಚಿತ್ರ 'ಸಲಾರ್' ಸಿನಿಮಾ ಟೀಸರ್ 10 ಕೋಟಿ ಚಿತ್ರರಸಿಕರನ್ನು ತಲುಪಿ ಭಾರತೀಯ ಸಿನಿಮಾರಂಗದಲ್ಲಿ ಹೊಸ ದಾಖಲೆ ಬರೆದಿದೆ. ನಿಮ್ಮ ಅಭಿಮಾನದ ಬೆಂಬಲಕ್ಕೆ ನಾವು ಸದಾ ಋಣಿಗಳು. ನಿಮ್ಮ ಅಚಲ ಬೆಂಬಲವು ನಮ್ಮ ಆಸಕ್ತಿಗೆ ಚೈತನ್ಯ ತುಂಬಿ ಅಸಾಧಾರಣವಾದುದನ್ನು ಪ್ರೇಕ್ಷಕರ ಮುಂದಿಡಲು ಪ್ರೇರೇಪಿಸುತ್ತಿದೆ." ಎಂದು ಟ್ವೀಟ್ ಮಾಡಿ ಜನತೆಗೆ ಧನ್ಯವಾದ ತಿಳಿಸಿದೆ.