ನಟಿ ಮಹಿಮಾ ಚೌಧರಿ ಅವರು ಕಂಗನಾ ರಣಾವತ್ ಅಭಿನಯದ ಎಮರ್ಜೆನ್ಸಿ ಚಿತ್ರದಲ್ಲಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಚಿತ್ರ ತಯಾರಕರು ಶನಿವಾರ ಘೋಷಿಸಿದ್ದಾರೆ.
ಭವ್ಯ ಭಾರತದ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ನಟಿಸುತ್ತಿದ್ದಾರೆ. ಇಂದಿರಾ ಗಾಂಧಿ ಅವರ ಆಪ್ತರಾಗಿದ್ದ, ಲೇಖಕಿ ಪುಪುಲ್ ಜಯಕರ್ ಪಾತ್ರವನ್ನು ಪರ್ದೇಸ್, ದಾಗ್, ದಿಲ್ ಕ್ಯಾ ಕರೇ, ದಿಲ್ ಹೈ ತುಮ್ಹಾರಾ ಮತ್ತು ಓಂ ಜೈ ಜಗದೀಶ್‌ನಂತಹ ಚಲನಚಿತ್ರಗಳಿಂದ ಹೆಸರುವಾಸಿಯಾದ ನಟಿ ಮಹಿಮಾ ಚೌಧರಿ ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಮಹಿಮಾ ಚೌಧರಿ ಅವರ ನೋಟವನ್ನು ನಟಿ ಕಂಗನಾ ರಣಾವತ್ ಹಂಚಿಕೊಂಡಿದ್ದಾರೆ.
ಈ ಎಮರ್ಜೆನ್ಸಿ ಸಿನಿಮಾ ಅನ್ನು ಸ್ವತಃ ಕಂಗನಾ ಬರೆದು, ನಿರ್ದೇಶಿಸಿದ್ದಾರೆ. ಜೊತೆಗೆ ಮಾಜಿ ಪ್ರಧಾನಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹಿರಿಯ ನಟ ಅನುಪಮ್ ಖೇರ್ ಅವರು ಕ್ರಾಂತಿಕಾರಿ ನಾಯಕ ಜೆ ಪಿ ನಾರಾಯಣ್ ಮತ್ತು ಶ್ರೇಯಸ್ ತಲ್ಪಾಡೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ಸೋನಂ.. ಅಜ್ಜನಾದ ಖುಷಿಯಲ್ಲಿ ಅನಿಲ್ ಕಪೂರ್
ನಟಿ ಮಹಿಮಾ ಚೌಧರಿ ಅವರು ಚಿತ್ರದಲ್ಲಿ ಪ್ರಮುಖ ಪಾತ್ರವಾದ ಪುಪುಲ್ ಜಯಕರ್ ಆಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಂಗನಾ ರಣಾವತ್ ತಿಳಿಸಿದರು. ಪುಪುಲ್ ಜಯಕರ್ ಅವರು ಲೇಖಕರಾಗಿದ್ದರು. ಇಂದಿರಾ ಗಾಂಧಿಯವರ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದರು ಮತ್ತು ಅವರ ಆತ್ಮಚರಿತ್ರೆಯನ್ನೂ ಬರೆದಿದ್ದಾರೆ.