ತೆಲುಗು ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಕೇವಲ ಸಿನಿಮಾಗಳಿಗೆ ಮಾತ್ರವಲ್ಲದೇ ಕುಟುಂಬಕ್ಕೆ ತಮ್ಮ ನಿರ್ದಿಷ್ಟ ಸಮಯ ಮೀಸಲಿಡುತ್ತಾರೆ. ಪ್ರವಾಸಕ್ಕೆ ಹೆಚ್ಚು ಆದ್ಯತೆ ಕೊಡುವ ನಟ ಕುಟುಂಬಸ್ಥರೊಂದಿಗೆ ಉತ್ತಮ ಸಮಯ ಕಳೆಯಲು ಇಷ್ಟಪಡುತ್ತಾರೆ.
ಮಹೇಶ್ ಬಾಬು ಫ್ಯಾಮಿಲಿ ಪ್ರವಾಸ: ಸೌತ್ ಸಿನಿಮಾ ನಟ ಆಗಾಗ್ಗೆ ಪ್ರವಾಸ ಕೈಗೊಳ್ಳುತ್ತಿರುತ್ತಾರೆ. ಕಳೆದ ಮೇ.ನಲ್ಲಿ ಸ್ಪೇನ್ ಪ್ರವಾಸ ಎಂಜಾಯ್ ಮಾಡಿದ್ದರು. ಇದೀಗ ಮತ್ತೊಮ್ಮೆ ಸೂಪರ್ಸ್ಟಾರ್ ತಮ್ಮ ಕುಟುಂಬದೊಂದಿಗೆ ಪ್ರವಾಸಕ್ಕೆ ಹೊರಟಿದ್ದಾರೆ. ಇಂದು ಬೆಳಗ್ಗೆ ಮಹೇಶ್ ಬಾಬು, ಪತ್ನಿ ನಮ್ರತಾ ಶಿರೋಡ್ಕರ್ ಮತ್ತು ಮಕ್ಕಳಾದ ಗೌತಮ್, ಸಿತಾರಾ ಜೊತೆ ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು.
ಸಿತಾರಾ ಜನ್ಮದಿನ:ಇತ್ತೀಚೆಗೆ ಪುತ್ರಿ ಸಿತಾರಾ 11 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಮುದ್ದು ಮಗಳು ಸಿತಾರಾ ಅವರ ಹುಟ್ಟುಹಬ್ಬವನ್ನು ಆಚರಿಸುವ ಸಲುವಾಗಿ ಈ ಪ್ರವಾಸ ಕೈಗೊಳ್ಳಲಾಗಿದೆ ಎಂದು ವರದಿಯಾಗಿದೆ. ಜುಲೈ 20 ರಂದು ಸಿತಾರಾ ಅವರ ಹುಟ್ಟುಹಬ್ಬವನ್ನು ಮಹೇಶ್ ಬಾಬು ಫೌಂಡೇಶನ್ನ ಸದಸ್ಯರೊಂದಿಗೆ ಮನೆಯಲ್ಲಿಯೇ ಆಚರಿಸಲಾಯಿತು.
ಸಿತಾರಾ ಅವರ 11 ನೇ ವರ್ಷದ ಹುಟ್ಟುಹಬ್ಬ ವಿಶೇಷವಾಗಿತ್ತು. ಏಕೆಂದರೆ ಆಭರಣ ಜಾಹೀರಾತೊಂದರ ಸಲುವಾಗಿ ಟೈಮ್ಸ್ ಸ್ಕ್ವೇರ್ನಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅದರಿಂದ ಪಡೆದ ಸಂಭಾವನೆಯನ್ನು ಸಮಾಜ ಸೇವೆಗೆ ಬಳಸಿದ್ದರು. ಈ ವಿಚಾರವಾಗಿ ಸಿತಾರಾ ಸುದ್ದಿಯಲ್ಲಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಿತಾರಾ, ಜಾಹೀರಾತಿನ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ. ಮಹೇಶ್ ಬಾಬು ಮತ್ತು ನಮ್ರತಾ ಅವರ ಮುದ್ದು ಮಗಳು ಇಷ್ಟು ಚಿಕ್ಕ ವಯಸ್ಸಿನಲ್ಲೇ ಈ ಸಾಧನೆ ಮಾಡುವ ಮೂಲಕ ಇತರರಿಗೆ ಸ್ಫೂರ್ತಿ ಆಗಿದ್ದಾರೆ. ಈ ಸಾಧನೆ ಮಾಡಿದ ಮೊದಲ ತೆಲುಗು ಸ್ಟಾರ್ ಕಿಡ್ ಎಂದು ಸಹ ಹೇಳಲಾಗಿದೆ.