ಟಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ನಟ ಮಹೇಶ್ ಬಾಬು ಹಾಗೂ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬೋದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ'. ಮುಂದಿನ ವರ್ಷ ಸಂಕ್ರಾಂತಿ ಸಮಯದಲ್ಲಿ ಚಿತ್ರ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯ ಈ ಸಿನಿಮಾದ ಬಗ್ಗೆ ಕ್ರೇಜಿ ಅಪ್ಡೇಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
2003ರಲ್ಲಿ ತೆರೆ ಕಂಡ 'ಒಕ್ದುಡು' ಚಿತ್ರದಲ್ಲಿನ 'ಚೆಪ್ಪವೇ ಚಿರುಗಾಳಿ, ಚೆಪ್ಪವೇ ಎಡ ಗಿಲ್ಲಿ' ಎಂಬ ಹಾಡು ಸೂಪರ್ ಹಿಟ್ ಆಗಿತ್ತು. ಮೆಲೋಡಿ ಬ್ರಹ್ಮ ಮಣಿಶರ್ಮ ಅವರ ಸಂಗೀತ ಸಂಯೋಜನೆಯ ಈ ಹಾಡು ಮಹೇಶ್ ಬಾಬು ವೃತ್ತಿಜೀವನದ ಅತ್ಯುತ್ತಮ ಹಾಡುಗಳಲ್ಲಿ ಒಂದು. ಖ್ಯಾತ ಗಾಯಕ ಉದಿತ್ ನಾರಾಯಣ್ ಹಾಡಿರುವ ಗೀತೆಯನ್ನು ಇದೀಗ ಮಹೇಶ್ ಹಾಡಿದ್ದಾರೆ.
'ಗುಂಟೂರು ಖಾರಂ' ಚಿತ್ರದಲ್ಲಿ ನಾಯಕಿ ಶ್ರೀಲೀಲಾರನ್ನು ಮೆಚ್ಚಿಸಲು ಮಹೇಶ್ ಬಾಬು 'ಚೆಪ್ಪವೇ ಚಿರುಗಾಳಿ, ಚೆಪ್ಪವೇ ಎಡ ಗಿಲ್ಲಿ' ಹಾಡು ಹಾಡಿದ್ದಾರೆ. ಆದರೆ ನಟ ಇಡೀ ಹಾಡನ್ನು ಹಾಡದೇ ಮೊದಲೆರಡು ಸಾಲುಗಳನ್ನು ಮಾತ್ರ ತಮ್ಮದೇ ಶೈಲಿಯಲ್ಲಿ ಹಾಡಿದ್ದಾರೆ ಎಂದು ವರದಿಯಾಗಿದೆ. ಈ ದೃಶ್ಯ ಅಭಿಮಾನಿಗಳನ್ನು ಆಕರ್ಷಿಸಲಿದೆ. ತ್ರಿವಿಕ್ರಮ್ ಕೂಡ ನೋಡುಗರಿಗೆ ಇಷ್ಟವಾಗುವಂತೆ ದೃಶ್ಯವನ್ನು ಚಿತ್ರೀಕರಿಸಿದ್ದಾರೆ. ಈ ವಿಷಯ ತಿಳಿದ ಮಹೇಶ್ ಬಾಬು ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.