ಬಹುನಿರೀಕ್ಷಿತ ಸಿನಿಮಾ 'ಜವಾನ್' ಅಂದುಕೊಂಡಂತೆ ದಾಖಲೆಗಳನ್ನು ಪುಡಿಗಟ್ಟಿದೆ. ನಿರೀಕ್ಷೆಯಂತೆ ಮೊದಲ ದಿನವೇ ಭಾರತೀಯ ಬಾಕ್ಸ್ ಆಫೀಸ್ನಲ್ಲಿ 75 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಬೆಸ್ಟ್ ಓಪನಿಂಗ್ ಪಡೆದ ಸಿನಿಮಾವಾಗಿ ಜವಾನ್ ಹೊರಹೊಮ್ಮಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ತಮ್ಮದೇ ದಾಖಲೆಯನ್ನು ಪುಡಿಗಟ್ಟಿದ್ದಾರೆ. ಈವರೆಗೆ ಪಠಾಣ್ ಹಿಂದಿ ಚಿತ್ರರಂದಲ್ಲಿ ಮೊದಲ ದಿನ ಅತ್ಯಧಿಕ ಕಲೆಕ್ಷನ್ ಮಾಡಿದ ಸಿನಿಮಾವಾಗಿ ಗುರುತಿಸಿಕೊಂಡಿತ್ತು. ಇದೀಗ ಈ ಪಟ್ಟಕ್ಕೆ 'ಜವಾನ್' ಏರಿದೆ.
ಜವಾನ್ ಸಿನಿಮಾ ಬಿಡುಗಡೆ ಹಿನ್ನೆಲೆ ನಿನ್ನೆ ದೇಶಾದ್ಯಂತ ಹಬ್ಬದ ವಾತಾವರಣ ನಿರ್ಮಾಣಗೊಂಡಿತ್ತು. ವಾರದ ದಿನವಾದರೂ ಮೊದಲ ದಿನವೇ ಕೋಟ್ಯಂತರ ಸಂಖ್ಯೆಯ ಪ್ರೇಕ್ಷಕರು ಸಿನಿಮಾ ವೀಕ್ಷಿಸಿ ಸಂಭ್ರಮಿಸಿದ್ದಾರೆ. ವಾರದ ದಿನದ ಕಲೆಕ್ಷನ್ ಈ ಮಟ್ಟಿಗಿದ್ದರೆ, ಇನ್ನು ವಾರಾಂತ್ಯದ ಕಲೆಕ್ಷನ್ ಹೇಗಿರಬಹುದು ಎಂದು ಅಭಿಮಾನಿಗಳೂ ಸೇರಿದಂತೆ ಚಿತ್ರರಂಗದವರು ಊಹಿಸುತ್ತಿದ್ದಾರೆ. ಚಿತ್ರಮಂದಿರಗಳ ಒಳಗೂ ಮತ್ತು ಹೊರಗೂ ಸೆಲೆಬ್ರೇಶನ್ ಜೋರಾಗೇ ಇದೆ. ಪಟಾಕಿ ಸಿಡಿಸುವಿಕೆ, ಸಿಹಿ ಹಂಚುವಿಕೆ, ಸಿಳ್ಳೆ, ಚಪ್ಪಾಳೆ ಜೋರಾಗೇ ಇದೆ.
ಅಭಿಮಾನಿಗಳು ಮಾತ್ರವಲ್ಲದೇ ಸ್ಟಾರ್ ನಟರೂ ಕೂಡ ಈ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ ನಟನ ಸಿನಿಮಾದಿಂದ ದಕ್ಷಿಣದ ಹೀರೋ ಪ್ರಭಾವಿತರಾಗಿದ್ದಾರೆ. ಈ ಸಿನಿಮಾ ಕುರಿತು ಟಾಲಿವುಡ್ ಆ್ಯಕ್ಷನ್ ಪ್ರಿನ್ಸ್ ಮಹೇಶ್ ಬಾಬು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರ ಸಖತ್ ಸದ್ದು ಮಾಡುತ್ತಿದೆ.