ಹೊಸ ವರ್ಷವನ್ನು ಎಲ್ಲರೂ ತಮ್ಮದೇ ಆದ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ 2024ರ ಮೊದಲ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇಂದು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹೊಸ ವರ್ಷಕ್ಕೆ ಸಂಬಂಧಿಸಿದಂತೆ ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮಹೇಶ್ ಬಾಬು, ಮಕ್ಕಳಾದ ಗೌತಮ್ ಮತ್ತು ಸಿತಾರಾ, ಹಾಗೇ ಸಂಬಂಧಿಯೋರ್ವರು ಈ ಚಿತ್ರದಲ್ಲಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಂಚಿಕೊಂಡ ನಮ್ರತಾ ಶಿರೋಡ್ಕರ್, "ಇದೊಂದು ಫ್ಯಾಮಿಲಿ ಡೇಟ್. 2024ರ ಮೊದಲನೆಯದು. ಪ್ರೀತಿ, ಪ್ರೀತಿ, ಹೆಚ್ಚು ಪ್ರೀತಿ. ಪ್ರೀತಿ, ಧನ್ಯತಾಭಾವದೊಂದಿಗೆ ಈ ವರ್ಷವನ್ನು ಆರಂಭಿಸುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಸೂಪರ್ ಸ್ಟಾರ್ನ ಫ್ಯಾಮಿಲಿ ಫೋಟೋಗೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಫೋಟೋವೊಂದರಲ್ಲಿ ಮಕ್ಕಳೊಂದಿಗೆ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ. ಎರಡನೇ ಚಿತ್ರದಲ್ಲಿ ನಮ್ರತಾ ಶಿರೋಡ್ಕರ್, ಮಕ್ಕಳೊಂದಿಗೆ ಕಾಣಿಸಿಕೊಂಡಿದ್ದಾರೆ. ಮೂರನೇ ಚಿತ್ರದಲ್ಲಿ ಸಿತಾರಾ, ಗೌತಮ್ ಮತ್ತು ಅವರ ಸೋದರಸಂಬಂಧಿ ಇದ್ದಾರೆ. ಇದಕ್ಕೂ ಮುನ್ನ ನ್ಯೂ ಇಯರ್ ಸೆಲೆಬ್ರೇಶನ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ ನಮ್ರತಾ ಶಿರೋಡ್ಕರ್.
ನಟ ಮಹೇಶ್ ಬಾಬು ಅವರು ಪತ್ನಿ ನಮ್ರತಾ ಜೊತೆಗಿರುವ ಮುದ್ದಾದ ಫೋಟೋ ಶೇರ್ ಮಾಡಿ, ಅಭಿಮಾನಿಗಳಿಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಇನ್ಸ್ಟಾಗ್ರಾಮ್ ಪೋಸ್ಟ್ ಕ್ಯಾಪ್ಷನ್ನಲ್ಲಿ, ''ನಗು, ಪ್ರೀತಿ, ಸಾಹಸ, ಬೆಳವಣಿಗೆ. ಹ್ಯಾಪಿ ನ್ಯೂ ಇಯರ್, 2024" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನಮ್ರತಾ "ಲವ್ ಯು ಟೂ, ಫಾರೆವರ್" ಎಂದು ತಿಳಿಸಿದ್ದಾರೆ.