ಸೂಪರ್ ಸ್ಟಾರ್ ಮಹೇಶ್ ಬಾಬು ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಗುಂಟೂರು ಖಾರಂ' ಬಿಡುಗಡೆಗೆ ಇನ್ನು ನಾಲ್ಕು ದಿನಗಳು ಬಾಕಿಯಷ್ಟೇ. 2024ರ ಬಹುನಿರಿಕ್ಷಿತ ಚಿತ್ರವಿದು. ಸೂಪರ್ ಸ್ಟಾರ್ನ ಸಿನಿಮಾ ಮೇಲೆ ಅಪಾರ ಸಂಖ್ಯೆಯ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಇದೆ. ಅಭಿಮಾನಿಗಳು ತಮ್ಮ ಉತ್ಸಾಹ ಪ್ರದರ್ಶಿಸುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿವೆ. ಇಂದು ನಾಯಕ ನಟ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರು ಅಭಿಮಾನಿಗಳ ಸಂಭ್ರಮಾಚರಣೆ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ.
ನಮ್ರತಾ ಶಿರೋಡ್ಕರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವುದರ ಜೊತೆಗೆ ಅಭಿಮಾನಿಗಳಿಗೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. "ಪ್ರೀತಿ, ಪ್ರೀತಿ, ಪ್ರೀತಿ ಪ್ರೀತಿ!. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ಸೂಪರ್ ಅಭಿಮಾನಿಗಳು. ಮೋರ್ ಅಂಡ್ ಮೋರ್!" ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋದಲ್ಲಿ, ಅಪಾರ ಸಂಖ್ಯೆಯ ಅಭಿಮಾನಿಗಳು ಚಿತ್ರದ ದಮ್ ಮಸಾಲಾ ಹಾಡು ಹಾಡುತ್ತಿರುವುದನ್ನು ಕಾಣಬಹುದು. ಎಲ್ಲರೂ ಒಟ್ಟಿಗೆ ಹಾಡಿ ಸಂಭ್ರಮಾಚರಿಸಿದ್ದು ನಿಜಕ್ಕೂ ಒಂದು ಅದ್ಭುತ ದೃಶ್ಯವಾಗಿತ್ತು. ಅಲ್ಲದೇ, ಚಿತ್ರದ ಟ್ರೇಲರ್ ಅನ್ನು ಹೈದರಾಬಾದ್‌ನ ಸುದರ್ಶನ್ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಗುತ್ತಿದ್ದು, ಚಿತ್ರದ ಸುತ್ತಲಿನ ಉತ್ಸಾಹವನ್ನು ಹೆಚ್ಚಿಸಿದೆ. ಅಭಿಮಾನಿಗಳ ಕ್ರೇಜ್ ಜೋರಾಗಿದೆ.
ಜನವರಿ 7 ರಂದು ಅನಾವರಣಗೊಂಡಿರುವ ಗುಂಟೂರು ಖಾರಂ ಟ್ರೇಲರ್ ಯೂಟ್ಯೂಬ್‌ನಲ್ಲಿ 40 ಮಿಲಿಯನ್ ವೀಕ್ಷಣೆಗಳನ್ನು ಕಂಡಿದೆ. ಇದು ಸಿನಿಮಾ ಬಗೆಗಿನ ಆಕರ್ಷಣೆ ಮತ್ತು ಪ್ರೇಕ್ಷಕರ ನಿರೀಕ್ಷೆಗಳನ್ನು ಸಾಬೀತುಪಡಿಸಿದೆ. 2 ನಿಮಿಷ ಮತ್ತು 47 ಸೆಕೆಂಡುಗಳ ರೋಮಾಂಚಕ ಟ್ರೇಲರ್ ಸಿನಿಮಾ ಸುತ್ತಲಿನ ಉತ್ಸಾಹ ಹೆಚ್ಚಿಸಿದೆ. ಮಹೇಶ್ ಬಾಬು ಅವರ ತೀವ್ರ ಆ್ಯಕ್ಷನ್ ಸೀಕ್ವೆನ್ಸ್‌ಗಳು ಸಿನಿಮಾ ನೋಡುವ ವೀಕ್ಷಕರ ಕಾತರವನ್ನು ಹೆಚ್ಚಿಸಿದೆ.