ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ಪುತ್ರಿ ಸಿತಾರಾ ಘಟ್ಟಮನೇನಿ ಬಾಲ್ಯದಿಂದಲೂ ಬಹುಮುಖ ಪ್ರತಿಭೆಯನ್ನು ತೋರಿಸುತ್ತಾ ಬರುತ್ತಿದ್ದಾರೆ. ಅನೇಕ ಯೂಟ್ಯೂಬ್ ಸಂದರ್ಶನಗಳು ಮತ್ತು ವಿಡಿಯೋಗಳಿಂದ ಜನಪ್ರಿಯವಾಗಿರುವ ಸಿತಾರಾ ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಗಳಿಸಿದ್ದಾರೆ. ಜೊತೆಗೆ ತಂದೆ ತಾಯಿಯಂತೆ ಅಂದ ಚೆಂದ ಮೈಗೂಡಿಸಿಕೊಂಡಿದ್ದಾರೆ. ಪ್ರತಿಭೆ ಎಂಬುದು ಇವರಿಗೆ ರಕ್ತಗತವಾಗಿಯೇ ಬಂದಿದೆ ಅಂತಲೇ ಹೇಳಬಹುದು.
ಇತ್ತೀಚೆಗಷ್ಟೇ ಖ್ಯಾತ ಆಭರಣ ಕಂಪನಿಯೊಂದರ ಬ್ರಾಂಡ್ ಅಂಬಾಸಿಡರ್ ಆಗಿ ಸಹಿ ಮಾಡಿರುವ ಸಿತಾರಾ ಇದೀಗ ಟ್ರೆಂಡಿಂಗ್ ಆಗಿದ್ದಾರೆ. ಇವರ ಫೋಟೋ ನ್ಯೂಯಾರ್ಕ್ ಸಿಟಿಯಲ್ಲಿರುವ ಟೈಮ್ ಸ್ಕ್ವೇರ್ನಲ್ಲಿ ಪ್ರದರ್ಶನಗೊಂಡಿದೆ. ಈ ಫೋಟೋ ಸದ್ಯ ವೈರಲ್ ಆಗುತ್ತಿದೆ. ಮಹೇಶ್ ಬಾಬು ಅವರು ಈ ಫೋಟೋವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಪೋಸ್ಟ್ ಮಾಡಿ ಮಗಳಿಗೆ ಹೊಗಳಿಕೆಯ ಸುರಿಮಳೆ ಹರಿಸಿದ್ದಾರೆ.
"ಟೈಮ್ಸ್ ಸ್ಕ್ವೇರ್ ಅನ್ನು ಬೆಳಗಿಸಲಾಗುತ್ತಿದೆ!! ನನ್ನ ಪಟಾಕಿ, ನಿನ್ನನ್ನು ನೋಡಿ ನನಗೆ ಹೆಮ್ಮೆಯಾಗುತ್ತಿದೆ. ಹೀಗೆಯೇ ಹೊಳೆಯುವುದನ್ನು ಮುಂದುವರೆಸು" ಎಂದು ಕ್ಯಾಪ್ಶನ್ ನೀಡಿದ್ದಾರೆ. ಮಹೇಶ್ ಪತ್ನಿ ನಮ್ರತಾ ಕೂಡ ಇದೇ ಚಿತ್ರ ಮತ್ತು ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು, ಮಗಳಿಗೆ ಪ್ರೀತಿಯ ಅಪ್ಪುಗೆ ನೀಡಿದ್ದಾರೆ.
ಇದನ್ನೂ ಓದಿ:ನಟ ಪವನ್ ಕಲ್ಯಾಣ್ ಇನ್ಸ್ಟಾಗೆ ಎಂಟ್ರಿ.. ಕೆಲವೇ ಗಂಟೆಗಳಲ್ಲಿ 9 ಲಕ್ಷಕ್ಕೂ ಅಧಿಕ ಪಾಲೋವರ್ಸ್!
"ಟೈಮ್ಸ್ ಸ್ಕ್ವೇರ್ನಲ್ಲಿ ಯಾರು ಪದಾರ್ಪಣೆ ಮಾಡಿದ್ದಾರೆ ಎಂದು ನೋಡಿ. ನಾನು ನಿನ್ನ ಬಗ್ಗೆ ಎಷ್ಟು ಸಂತೋಷ ಮತ್ತು ಹೆಮ್ಮೆಪಡುತ್ತೇನೆ ಎಂದು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಅವಳ ಕನಸುಗಳು ನನಸಾಗುವುದನ್ನು ನೋಡುವುದು ಅತ್ಯಂತ ನಂಬಲಾಗದ ಭಾವನೆ. ಯಾವಾಗಲೂ ಹೊಳೆಯುತ್ತಿರು ನನ್ನ ಸೂಪರ್ ಸ್ಟಾರ್" ಎಂದಿದ್ದಾರೆ.
ಮತ್ತೊಂದೆಡೆ ಸಿತಾರಾ ಮತ್ತು ಮಹೇಶ್ ಬಾಬು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಈ ಒಂದೇ ಒಂದು ಜಾಹೀರಾತಿನ ಮೂಲಕ ಸಿತಾರಾ ಎಲ್ಲೋ ಹೋಗಿ ಅಪ್ಪನನ್ನೂ ಮೀರಿಸಿದ್ದಾರೆ ಎಂಬ ಪ್ರತಿಕ್ರಿಯಿಸುತ್ತಿದ್ದಾರೆ. ಫೋಟೋ ಮತ್ತು ವಿಡಿಯೋದಲ್ಲಿ ಸಿತಾರಾ ಮೈ ತುಂಬಾ ಆಭರಣ ಧರಿಸಿ, ಆಕರ್ಷಕವಾಗಿ ಕಂಡಿದ್ದಾರೆ.
ಇಲ್ಲೊಂದು ವಿಶೇಷತೆ ಇದೆ. ಖ್ಯಾತ ಆಭರಣ ಕಂಪನಿಯವರು 'ಸಿತಾರಾ ಕಲೆಕ್ಷನ್' ಎಂದೇ ಹೆಸರಿಟ್ಟು ಪ್ರಚಾರ ಮಾಡುತ್ತಿದ್ದಾರೆ. ನ್ಯೂಯಾರ್ಕ್ನ ಟೈಮ್ ಸ್ಕ್ವೇರ್ನಲ್ಲಿ ಮಹೇಶ್ ಪುತ್ರಿಯ ಫೋಟೋ ರಾರಾಜಿಸಿದೆ. ಈ ಒಂದು ಬ್ರ್ಯಾಂಡ್ ಜಾಹೀರಾತಿಗಾಗಿ ಕಂಪನಿಯಿಂದ ಸಿತಾರಾ ಭಾರಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಸಣ್ಣ ವಯಸ್ಸಿನಲ್ಲಿ ಸಾಕಷ್ಟು ಸಾಧನೆ ಮಾಡಿದ ಸಿತಾರಾಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಸಿತಾರಾಗೆ ಮುಂದೆ ನಾಯಕಿಯಾಗುವ ಅವಕಾಶಗಳು ಸಾಕಷ್ಟಿವೆ. ಈಗಿನಿಂದಲೇ ಆ ನಿಟ್ಟಿನಲ್ಲಿ ತರಬೇತಿಯನ್ನು ತೆಗೆದುಕೊಳ್ಳಲಾಗುತ್ತಿದೆಯಂತೆ. ಇದಲ್ಲದೇ, ಸಿತಾರಾ ಅವರ ತಂದೆ ಮಹೇಶ್ ಬಾಬು ಅಭಿನಯದ 'ಸರ್ಕಾರಿವಾರಿ ಪಟ' ಚಿತ್ರದ ಪೆನ್ನಿ ಹಾಡಿನ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದರು. ತನ್ನ ತಂದೆಯೊಂದಿಗೆ ನೃತ್ಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಿತಾರಾ ತನ್ನ ಸ್ವಾಭಾವಿಕತೆಯಿಂದ ಪ್ರಭಾವಿತರಾಗಿದ್ದಾರೆ.
ಇದನ್ನೂ ಓದಿ:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಟ್ರೇಲರ್: ತೆರೆ ಮೇಲಿನ ರಣ್ವೀರ್-ಆಲಿಯಾ ಪ್ರೇಮಕಥೆ ವೀಕ್ಷಿಸಲು ಅಭಿಮಾನಿಗಳ ಕುತೂಹಲ