'ವಯಸ್ಸು ಕೇವಲ ಒಂದು ಸಂಖ್ಯೆಯಷ್ಟೇ' ಎಂಬ ಮಾತಿಗೆ ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು ಉತ್ತಮ ಉದಾಹರಣೆ. 48 ವರ್ಷ ವಯಸ್ಸಾಗಿದ್ದರೂ, ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಸದಾ ಮುಂದಿದ್ದಾರೆ. ಇವರ ಇತ್ತೀಚಿನ ಫೋಟೋಗಳನ್ನು ನೋಡಿದರೆ, ಈ ಸಂಗತಿ ನಿಮಗೆ ತಿಳಿಯಬಹುದು. ಸಿನಿಮಾ ಜೊತೆಗೆ ಫ್ಯಾಮಿಲಿಗೂ ಅಷ್ಟೇ ಟೈಮ್ ಕೊಡುವ ನಟ ಇತ್ತೀಚೆಗೆ ಹೆಂಡತಿ ಮಕ್ಕಳ ಜೊತೆ ಟ್ರಿಪ್ ಹೋಗಿದ್ದರು. ಇದೀಗ ಮತ್ತೆ ಅವರ ಬಹುನಿರೀಕ್ಷಿತ ಮುಂದಿನ ಸಿನಿಮಾ 'ಗುಂಟೂರು ಖಾರಂ' ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ.
ಆದರೆ ಇತ್ತೀಚಿನ ಇವರ ಕುರಿತಾದ ಇಂಟ್ರಸ್ಟಿಂಗ್ ವಿಚಾರವೊಂದು ಎಲ್ಲೆಡೆ ಸದ್ದು ಮಾಡುತ್ತಿದೆ. ಬಾಲ ಕಲಾವಿದನಾಗಿ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಈವರೆಗೆ ಸುಮಾರು 25 ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನೂ ಹಲವು ಸೂಪರ್ ಹಿಟ್ ಚಿತ್ರಗಳನ್ನು ತಮ್ಮ ಖಾತೆಯಲ್ಲಿ ಇಟ್ಟುಕೊಂಡಿರುವ ಮಹೇಶ್ ತಮ್ಮ ವೃತ್ತಿಜೀವನದಲ್ಲಿ ಒಂದು ವಿಚಾರವನ್ನು ಮೊದಲಿನಿಂದಲೂ ಅನುಸರಿಸಿಕೊಂಡು ಬಂದಿದ್ದಾರೆ. ಅವರು ತಮ್ಮ ಯಾವುದೇ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಹಾಜರಾಗುವುದೇ ಇಲ್ಲ.
ಅವರ ಇಡೀ ವೃತ್ತಿ ಜೀವನದಲ್ಲಿ ಈವರೆಗೆ ಯಾವುದೇ ಸಿನಿಮಾದ ಪೂಜಾ ಕಾರ್ಯಕ್ರಮಕ್ಕೂ ಅವರು ಹಾಜರಾಗಿದ್ದೇ ಇಲ್ಲ. ಅವರು ತಮ್ಮ ಮೊದಲ ಸಿನಿಮಾದಿಂದಲೂ ಇದೇ ರೂಢಿಯನ್ನು ಅನುಸರಿಸಿಕೊಂಡು ಬಂದಿದ್ದಾರೆ. ಮಹೇಶ್ ಬಾಬು ಬದಲಿಗೆ ಅವರ ಪತ್ನಿ ನಮ್ರತಾ ಶಿರೋಡ್ಕರ್ ಅಥವಾ ಅವರ ಮಕ್ಕಳಾದ ಗೌತಮ್ ಮತ್ತು ಸಿತಾರಾ ಸಿನಿಮಾಗಳ ಪೂಜಾ ಕಾರ್ಯಕ್ರಮಕ್ಕೆ ಹಾಜರಾಗುತ್ತಾರೆ. ಆದರೆ ಮಹೇಶ್ ಯಾಕಾಗಿ ಈ ಕ್ರಮವನ್ನು ಅನುಸರಿಸುತ್ತಿದ್ದಾರೆ ಎಂಬ ಕಾರಣ ಮಾತ್ರ ತಿಳಿದುಬಂದಿಲ್ಲ.