ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಕಪಿಲ್ ಶರ್ಮಾ ಮತ್ತು ನಟಿಯರಾದ ಹುಮಾ ಖುರೇಷಿ, ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ಇಂದು ಸಮನ್ಸ್ ಜಾರಿ ಮಾಡಿತು. ಹಿಂದಿ ಚಿತ್ರರಂಗದ ನಟ ರಣ್ಬೀರ್ ಕಪೂರ್ ಅವರಿಗೂ ನಿನ್ನೆಯಷ್ಟೇ ಸಮನ್ಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಕಪಿಲ್ ಶರ್ಮಾ ಜೊತೆಗೆ ಹುಮಾ ಖುರೇಷಿ ಮತ್ತು ಹೀನಾ ಖಾನ್ ಅವರಿಗೆ ಬೇರೆ ಬೇರೆ ದಿನಾಂಕಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ನಲ್ಲಿ ತಿಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ರಣ್ಬೀರ್ ಕಪೂರ್ ಅವರಿಗೆ ಅಕ್ಟೋಬರ್ 6ರಂದು ರಾಯ್ಪುರದ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ಸಮನ್ಸ್ನಲ್ಲಿ ಸೂಚಿಸಿದ್ದರು. ಆದರೆ ನಟ ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ ಎಂದು ವರದಿಯಾಗಿದೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್ನೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಜಾರಿ ನಿರ್ದೇಶನಾಲಯ ಈ ತನಿಖೆ ಕೈಗೆತ್ತಿಕೊಂಡಿದೆ. ನಿನ್ನೆಯಷ್ಟೇ ಇಡಿ ಗುರಿಯಲ್ಲಿ ರಣ್ಬೀರ್ ಕಪೂರ್ ಸೇರಿ 15 ಸೆಲೆಬ್ರಿಟಿಗಳು ಇದ್ದಾರೆ ಎಂದು ಹೇಳಲಾಗಿತ್ತು. ಇಂದು ಖ್ಯಾತ ಮೂವರು ನಟರಿಗೆ ಇಡಿ ಸಮನ್ಸ್ ಜಾರಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಸರುಗಳು ಹೊರಬರಲು ಬಾಕಿ ಇದೆ ಎನ್ನಲಾಗಿದೆ.
ಇದನ್ನೂ ಓದಿ:ವಸತಿ ಫ್ಲಾಟ್ಗಳ ಹೆಸರಲ್ಲಿ ವಂಚನೆ ಆರೋಪ.. ಇಡಿ ವಿಚಾರಣೆಗೆ ಹಾಜರಾದ ನಟಿ, ಸಂಸದೆ ನುಸ್ರತ್ ಜಹಾನ್
ಸುಮಾರು 15 ಸೆಲೆಬ್ರಿಟಿಗಳು ಯುಎಇಯಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಅವರು ಆಯೋಜಿಸಿದ್ದ ಮ್ಯಾರೇಜ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಟೈಗರ್ ಶ್ರಾಫ್, ರಾಹತ್ ಫತೇಹ್ ಅಲಿ ಖಾನ್, ಅತೀಫ್ ಅಸ್ಲಾಂ, ಕೃಷ್ಣ ಅಭಿಷೇಕ್, ನುಶ್ರತ್ ಭರುಚಾ, ಸನ್ನಿ ಲಿಯೋನ್ ಸೇರಿದಂತೆ 15 ಜನ ಖ್ಯಾತನಾಮರ ಹೆಸರು ಕೇಳಿಬಂದಿದೆ.
ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಆದ ಮಹಾದೇವ್ ಬುಕ್ ಆ್ಯಪ್‌ನ ಸಂಸ್ಥಾಪಕರನ್ನು ಹಲವು ರಾಜ್ಯಗಳಲ್ಲಿ ಪೊಲೀಸರು ಮತ್ತು ಇಡಿ ಸೇರಿ ತನಿಖೆ ನಡೆಸುತ್ತಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದಕ್ಕೆ ಹವಾಲಾ ಮೂಲಕ 100 ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆಯಾಗಿದೆ ಎಂಬುದರ ಕುರಿತು ಪುರಾವೆಗಳನ್ನು ಸಹ ಇಡಿ ಸಂಗ್ರಹಿಸಿದೆ ಎಂದು ಇತ್ತೀಚೆಗಿನ ವರದಿಗಳು ತಿಳಿಸಿವೆ.
ಮಹಾದೇವ್ ಬುಕ್ ಆ್ಯಪ್‌ನ ಸಂಸ್ಥಾಪಕರ ತನಿಖೆ ನಡೆಯುತ್ತಿದೆ. ನಾಗ್ಪುರದಿಂದ ಯುಎಇಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಖಾಸಗಿ ಜೆಟ್ ಬಳಸಲಾಗಿದೆ. ದುಬೈನಲ್ಲಿ ಅದ್ಧೂರಿ ಮದುವೆ ಸಮಾರಂಭಕ್ಕಾಗಿ ಮಹದೇವ್ ಬುಕ್ ಆ್ಯಪ್ ಸುಮಾರು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ. ಮದುವೆಯ ಮೆರುಗು ಹೆಚ್ಚಿಸಲು ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ವೆಡ್ಡಿಂಗ್ ಪ್ಲಾನರ್‌ಗಳು, ಡ್ಯಾನ್ಸರ್‌ಗಳು, ಡೆಕೋರೇಟರ್‌ಗಳು ಸೇರಿದಂತೆ ಹಲವರನ್ನು ಮುಂಬೈನಿಂದಲೇ ನೇಮಿಸಲಾಗಿತ್ತು. ಹವಾಲಾ ಮೂಲಕ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪಗಳಿವೆ.
ಇದನ್ನೂ ಓದಿ:ಶಿಕ್ಷಕರ ನೇಮಕಾತಿ ಹಗರಣ: ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ತೃಣಮೂಲ ಸಂಸದ ಬ್ಯಾನರ್ಜಿ