'ಮಾಫಿಯಾ'.. ಕನ್ನಡ ಚಿತ್ರರಂಗದಲ್ಲಿ ಟೈಟಲ್ ಹಾಗೂ ಪೋಸ್ಟರ್ನಿಂದಲೇ ಕ್ರೇಜ್ ಹುಟ್ಟಿಸಿರೋ ಸಿನಿಮಾ. ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಖಾಕಿ ತೊಟ್ಟು ನಟಿಸಿರುವ 'ಮಾಫಿಯಾ' ಚಿತ್ರ ಬಹುತೇಕ ಶೂಟಿಂಗ್ ಮುಗಿಸಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಈ ಮಧ್ಯೆ ಚಿತ್ರದ ಹಾಡೊಂದನ್ನು ಚಿತ್ರತಂಡ ಅನಾವರಣಗೊಳಿಸಿದೆ. 'ತುಂಬನೇ ಕೇಳಲಾರೆ..' ಹಾಡು ಉತ್ತಮ ವೀಕ್ಷಣೆ ಪಡೆದುಕೊಳ್ಳುತ್ತಿದೆ.
ಈಗಾಗಲೇ ಟೀಸರ್ ಮೂಲಕ ಗಮನ ಸೆಳೆದಿದ್ದ ನಟ ಪ್ರಜ್ವಲ್ ದೇವರಾಜ್ ಅವರೀಗ ರೊಮ್ಯಾಂಟಿಕ್ ಸಾಂಗ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಚಿತ್ರದಲ್ಲಿ ಪ್ರಜ್ವಲ್‌ಗೆ ಜೋಡಿಯಾಗಿ ಅದಿತಿ ಪ್ರಭುದೇವ ಬಣ್ಣ ಹಚ್ಚಿದ್ದಾರೆ. ಇತ್ತೀಚಿಗಷ್ಟೇ ತಾಯಿಯಾಗುತ್ತಿರುವ ಸಂಭ್ರಮ ಹಂಚಿಕೊಂಡಿದ್ದ ಅದಿತಿ ಪ್ರಭುದೇವ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾವಿದು.
'ಮಾಫಿಯಾ' ಚಿತ್ರ ಮಮ್ಮಿ ಖ್ಯಾತಿಯ ನಿರ್ದೇಶಕ ಲೋಹಿತ್ ಸಾರಥ್ಯದಲ್ಲಿ ಮೂಡಿ ಬರುತ್ತಿದೆ. ಲೋಹಿತ್ ಮತ್ತು ಪ್ರಜ್ವಲ್ ದೇವರಾಜ್ ಕಾಂಬಿನೇಷನ್ನ ಮೊದಲ ಚಿತ್ರ ಇದಾಗಿದೆ. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಕೊಂಚ ಹೆಚ್ಚೇ ಇದೆ. ಸದ್ಯ ರಿಲೀಸ್ ಆಗಿರುವ 'ತುಂಬನೇ ಕೇಳಲಾರೆ..' ಸಾಲುಗಳಿಂದ ಪ್ರಾರಂಭವಾಗುವ ಈ ರೊಮ್ಯಾಂಟಿಕ್ ಹಾಡು ಹರಿಚರಣ್ ಧ್ವನಿಯಲ್ಲಿ ಮೂಡಿ ಬಂದಿದೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಪ್ರಮೋದ್ ಮರವಂತೆ ಅವರ ಸಾಹಿತ್ಯ ಈ ಹಾಡಿಗಿದೆ. ಪ್ರಜ್ವಲ್ ಮತ್ತು ಅದಿತಿ ಅವರನ್ನು ಈ ರೊಮ್ಯಾಂಟಿಕ್ ಹಾಡಿನಲ್ಲಿ ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
'ಮಾಫಿಯಾ' ಈಗಾಗಲೇ ಚಿತ್ರೀಕಣ ಮುಗಿಸಿ ರಿಲೀಸ್‌ಗೆ ರೆಡಿಯಾಗಿರುವ ಸಿನಿಮಾ. ಟೀಸರ್ ಮತ್ತು ಹಾಡಿನ ಮೂಲಕ ಪ್ರೇಕ್ಷಕರ ಗಮನ ಸೆಳೆದಿರುವ ಈ ಸಿನಿಮಾ ಶೀಘ್ರದಲ್ಲೇ ಚಿತ್ರಮಂದಿರಕ್ಕೆ ಎಂಟ್ರಿ ಕೊಡಲಿದೆ. ಚಿತ್ರಕ್ಕೆ ಕುಮಾರ್ ಬಂಡವಾಳ ಹೂಡಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಸಿನಿಮಾ ಮುಂದಿನ ತಿಂಗಳು ತೆರೆಕಾಣುವ ಸಾಧ್ಯತೆ ಇದೆ.