ಖ್ಯಾತ ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಅವರ ತಾಯಿ ಸ್ನೇಹಲತಾ ದೀಕ್ಷಿತ್ (90) ಇಂದು ಬೆಳಗ್ಗೆ ವಯೋಸಹಜ ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಮಾಧುರಿ ದೀಕ್ಷಿತ್ ದಂಪತಿ ಈ ಕುರಿತು ಮಾಹಿತಿ ನೀಡಿದ್ದಾರೆ. ಚಿತ್ರರಂಗ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಂಬೈನ ವರ್ಲಿಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ. "ಪ್ರೀತಿಪಾತ್ರರನ್ನು ನೋಡುತ್ತಾ ಅವರ ಮಧ್ಯೆಯೇ ಶಾಂತವಾಗಿ ಸ್ವರ್ಗಕ್ಕೆ ತೆರಳಿದರು" ಎಂದು ಮಾಧುರಿ ದೀಕ್ಷಿತ್ ಭಾವುಕರಾಗಿದ್ದಾರೆ.
ಮಾಧುರಿ ದೀಕ್ಷಿತ್ ತಾಯಿಯೊಂದಿಗೆ ಬಹಳ ಆತ್ಮೀಯವಾಗಿದ್ದರು. ವಯೋವೃದ್ಧ ತಾಯಿಗೆ ಹೆಚ್ಚು ಕಾಳಜಿ, ಪ್ರೀತಿ, ಸಮಯ ನೀಡುತ್ತಿದ್ದರು. ತಾಯಿಯ ಹುಟ್ಟುಹಬ್ಬದಂದು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ''ಹುಟ್ಟುಹಬ್ಬದ ಶುಭಾಶಯಗಳು ಅಮ್ಮಾ, ಮಗಳಿಗೆ ತಾಯಿಯೇ ಒಳ್ಳೆಯ ಗೆಳತಿ ಎನ್ನಲಾಗುತ್ತದೆ, ಅದು ನಿಜವಲ್ಲವೇ?, ನೀವು ನನಗಾಗಿ ಮಾಡಿದ ಎಲ್ಲವೂ ಮತ್ತು ನೀವು ನನಗೆ ಕಲಿಸಿದ ಎಲ್ಲವೂ ನನಗೆ ಉಡುಗೊರೆ'' ಎಂದು ತಿಳಿಸಿದ್ದರು.
ಸ್ನೇಹಲತಾ ದೀಕ್ಷಿತ್ ನಿಧನದ ಸುದ್ದಿ ಹೊರಬೀಳುತ್ತಿದ್ದಂತೆ, ಅಭಿಮಾನಿಗಳು ಮತ್ತು ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ. ''ಆರ್ಐಪಿ ಸ್ನೇಹಲತಾ ಜೀ, ಈ ಕಷ್ಟದ ಸಮಯದಲ್ಲಿ ಮಾಧುರಿ ದೀಕ್ಷಿತ್ ಮತ್ತು ಅವರ ಕುಟುಂಬಕ್ಕೆ ಸಂತಾಪಗಳು, ನಟಿಯ ತಾಯಿ ಈ ಜಗತ್ತಿಗೆ ತಂದ ಪ್ರೀತಿಯನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಓರ್ವರು ಬರೆದಿದ್ದಾರೆ. ಈ ಸಾವಿಗೆ ಕಳವಳ ವ್ಯಕ್ತಪಡಿಸಿದ ಮತ್ತೋರ್ವ ಅಭಿಮಾನಿ, "ಮಾಧುರಿ ಅವರ ಒಡಹುಟ್ಟಿದವರು ಸಹ ಭಾರತದಲ್ಲಿದ್ದಾರೆ. ತಾಯಿಯ ಕೊನೆಯ ದಿನಗಳಲ್ಲಿ ಎಲ್ಲರೂ ಒಟ್ಟಿಗೆ ಇದ್ದರು ಎಂಬುದು ಸಂತೋಷಕರ ವಿಷಯ ಎಂದು ತಿಳಿಸಿದ್ದಾರೆ.
ಮಾಧುರಿ ದೀಕ್ಷಿತ್ ತಾಯಿ ಸ್ನೇಹಲತಾ ದೀಕ್ಷಿತ್ ನಿಧನ
"ಬಾಲಿವುಡ್ ಖ್ಯಾತ ನಟಿ ಮಾಧುರಿ ದೀಕ್ಷಿತ್ ಅವರ ಜೀವನದಲ್ಲಿ ಅತ್ಯಂತ ಸ್ಫೂರ್ತಿದಾಯಕ ಮತ್ತು ಬೆಂಬಲ ನೀಡುವ ವ್ಯಕ್ತಿ ಇನ್ನಿಲ್ಲ ಎಂಬ ವಿಚಾರ ಹೃದಯ ವಿದ್ರಾವಕವಾಗಿದೆ. ಈ ಕಠಿಣ ಸಮಯದಲ್ಲಿ ನಟಿ ತುಂಬಾ ದುಃಖಿತರಾಗಿದ್ದಾರೆನೋ, ಅವರ ಹೃದಯವು ಅಳುತ್ತಿದೆಯೇನೋ, ಅವರ ಕುಟುಂಬಕ್ಕೆ ಸಂತಾಪಗಳು, ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಆರ್ಐಪಿ ಸ್ನೇಹಲತಾ ಜೀ'' ಎಂದು ಅಭಿಮಾನಿಯೋರ್ವರು ಬರೆದಿದ್ದಾರೆ. ಮತ್ತೊಬ್ಬರು "ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ನನ್ನ ಸಂತಾಪಗಳು ಮಾಧುರಿ ದೀಕ್ಷಿತ್ ಮೇಡಮ್'' ಎಂದು ಬರೆದಿದ್ದಾರೆ.
ಇದನ್ನೂ ಓದಿ:'ಮಾಹಿತಿಯಿಲ್ಲದೇ ಮಾತನಾಡಬಾರದು': ಮಿಥುನ್ ರೈಗೆ ಪರೋಕ್ಷ ಟಾಂಗ್ ಕೊಟ್ಟ ರಕ್ಷಿತ್ ಶೆಟ್ಟಿ
ಸ್ನೇಹಲತಾ ದೀಕ್ಷಿತ್ ಅವರು 2013ರಲ್ಲಿ ಬಿಡುಗಡೆ ಆಗಿದ್ದ ಮಾಧುರಿ ದೀಕ್ಷಿತ್ ಅವರ 'ಗುಲಾಬ್ ಗ್ಯಾಂಗ್' ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಚಿತ್ರದಲ್ಲಿ ಒಂದು ಹಾಡನ್ನು ಹಾಡಲು ಮಾಧುರಿ ಅವರ ತಾಯಿಯನ್ನು ಸಂಪರ್ಕಿಸಲಾಗಿತ್ತು. ಅವರು ಸಂತೋಷದಿಂದ ಒಪ್ಪಿಕೊಂಡರು. ರೆಕಾರ್ಡಿಂಗ್‌ಗೆ ನಟಿಯು ತಮ್ಮ ತಾಯಿಯೊಂದಿಗೆ ಬಂದಿದ್ದರು. ತಾಯಿ ತುಂಬಾ ಒಳ್ಳೆಯ ಗಾಯಕಿ ಎಂದು ನಮಗೆ ತಿಳಿದಿತ್ತು. ನಂತರ ನಾವು ಅವರನ್ನು ಹಾಡಲು ಒಪ್ಪಿಸಿದೆವು. ಚಿತ್ರದಲ್ಲಿ ಒಂದು ಹಾಡನ್ನು ಹಾಡೋಣ ಎಂದು ಅವರು ಹೇಳಿದ್ದರು ಎಂದು ನಿರ್ದೇಶಕ ಅನುಭವ್ ಸಿನ್ಹಾ ಈ ಹಿಂದೆ ತಮ್ಮ ಅನುಭವ ಹಂಚಿಕೊಂಡಿದ್ದರು.
ಇದನ್ನೂ ಓದಿ:'15 ಕೋಟಿ ರೂ.ಗಾಗಿ ನಟ ಸತೀಶ್ ಕೌಶಿಕ್ ಕೊಲೆ': ಪ್ರಕರಣ ದಾಖಲಿಸಿದ ಮಹಿಳೆ
ಮಾಧುರಿ ದೀಕ್ಷಿತ್ ನೃತ್ಯಗಾರ್ತಿ, ಟಾಪ್ ಹೀರೋಯಿನ್ ಆಗಿ ಬಾಲಿವುಡ್ನಲ್ಲಿ ಸ್ಟಾರ್ ಡಮ್ ಗಳಿಸಿದ್ದಾರೆ. 1998ರಲ್ಲಿ, ಅವರ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ ಡಾ. ಶ್ರೀರಾಮ್ ನೆನೆ ಅವರನ್ನು ಮದುವೆಯಾಗಿ ಅಮೆರಿಕಾದಲ್ಲಿ ನೆಲೆಸಿದರು. ಕೆಲ ಸಮಯದ ಬಳಿಕ ಭಾರತಕ್ಕೆ ಬಂದು ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದರು. ಟಿವಿ ಶೋಗಳಿಗೆ ತೀರ್ಪುಗಾರರಾಗಿರುವುದರ ಜೊತೆಗೆ ಹಲವು ಜಾಹೀರಾತುಗಳಲ್ಲೂ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲೂ ಪ್ರಮುಖ ಪಾತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನಸೂರೆಗೊಳ್ಳುತ್ತಿದ್ದಾರೆ.