ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬರವಣಿಗೆ ಮೇಲಿನ ಆಸಕ್ತಿಯನ್ನು ನವರಾತ್ರಿಗೆ ಹಾಡೊಂದನ್ನು ರಚಿಸುವ ಮೂಲಕ ಪ್ರದರ್ಶಿಸಿದ್ದಾರೆ. ನವರಾತ್ರಿಗಾಗಿ ಮೋದಿ ರಚನೆಯ 'ಗರ್ಬಾ' ಹಾಡನ್ನು ಬಿಡುಗಡೆ ಮಾಡಲಾಗಿದೆ. ಅವರದ್ದೇ ಯೂಟ್ಯೂಬ್ ಚಾನೆಲ್ನಲ್ಲಿ ಈ ಹಾಡನ್ನು ಹಂಚಿಕೊಳ್ಳಲಾಗಿದೆ. ಇದೀಗ ಹಾಡಿನ ಲಿಂಕ್ ಅನ್ನು ಪ್ರಧಾನಿ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ, ಭಾರತೀಯರಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿದ್ದಾರೆ.
ಮೋದಿ ಎಕ್ಸ್ ಪೋಸ್ಟ್: ಇಂದಿನಿಂದ ನವರಾತ್ರಿ ಪ್ರಾರಂಭಗೊಂಡಿದ್ದು, ಭಾರತೀಯರಿಗೆ ಶುಭಕೋರಿ ಪ್ರಧಾನಿ ತಾವು ಬರೆದ 'ಗರ್ಬಾ' ಹಾಡನ್ನು ಹಂಚಿಕೊಂಡಿದ್ದಾರೆ. "ಮಂಗಳಕರವಾದ ನವರಾತ್ರಿಯು ಆಗಮಿಸುತ್ತಿದ್ದಂತೆ, ಕಳೆದ ವಾರ ನಾನು ಬರೆದ ಗಾರ್ಬಾವನ್ನು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಈ ಹಬ್ಬದ ಟ್ಯೂನ್ ಎಲ್ಲರನ್ನೂ ಆಕರ್ಷಿಸಲಿ. ಈ ಹಾಡಿಗೆ ಧ್ವನಿ ಮತ್ತು ಸಂಗೀತ ನೀಡಿರುವ ಮೀಟ್ ಬ್ರದರ್ಸ್, ದಿವ್ಯಾ ಕುಮಾರ್ ಅವರಿಗೆ ನಾನು ಧನ್ಯವಾದಗಳು" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಈ ಹಾಡಿನಲ್ಲಿ ವಿಶೇಷವಾಗಿ ಗುಜರಾತ್ನ ಸಾಂಸ್ಕೃತಿಕ ವೈಭವವನ್ನು ಬಿಂಬಿಸಲಾಗಿದೆ. ಎಕ್ಸ್ನಲ್ಲಿ ಸಮಸ್ತ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ಕೋರಿರುವ ಮೋದಿ, ಶಕ್ತಿ ಪ್ರದಾಯಿನಿ ಮಾ ದುರ್ಗಾ ಪ್ರತಿಯೊಬ್ಬರ ಜೀವನದಲ್ಲಿ ಸಂತೋಷ, ಸಮೃದ್ಧಿ, ಅದೃಷ್ಟ ಮತ್ತು ಉತ್ತಮ ಆರೋಗ್ಯವನ್ನು ಕರುಣಿಸಲಿ ಎಂದು ಹಾರೈಸಿದ್ದಾರೆ. ಈ 'ಗರ್ಬಾ' ಹಾಡಿಗೆ ದಿವ್ಯಾ ಕುಮಾರ್ ಧ್ವನಿಯಾಗಿದ್ದಾರೆ. ಮೀಟ್ ಬ್ರದಸ್ನ ಮನ್ಮೀತ್ ಸಿಂಗ್ ಮತ್ತು ಹರ್ಮೀತ್ ಸಿಂಗ್ ಸಂಗೀತ ಸಂಯೋಜಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಾಹಿತ್ಯ ಬರೆದಿದ್ದಾರೆ.