ವಿಶ್ವ ಪ್ರಸಿದ್ಧ ಮೈಸೂರು ದಸರಾಗೆ ಭಾನುವಾರ ಚಾಲನೆ ಸಿಗಲಿದೆ. ಕನ್ನಡ ಚಿತ್ರರಂಗದ ನಾದ ಬ್ರಹ್ಮ ಹಂಸಲೇಖ ಅವರು ಅ.15 ರಂದು ಬೆಳಗ್ಗೆ ನಾಡ ಅಧಿದೇವತೆ ಚಾಮುಂಡೇಶ್ವರಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡುವರು. ಬೆಳಗ್ಗೆ 10.15ರಿಂದ 10.36ರ ನಡುವಿನ ಶುಭ ವೃಶ್ಚಿಕ ಲಗ್ನದ ಶುಭ ಮುಹೂರ್ತದಲ್ಲಿ ಅದ್ಧೂರಿ ದಸರಾ ಉದ್ಘಾಟನಾ ಸಮಾರಂಭ ನಡೆಯಲಿದೆ. ಜೊತೆಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪುಷ್ಪಾರ್ಚನೆ ಮಾಡಲಿದ್ದಾರೆ.
ನಾಡಹಬ್ಬ ದಸರಾಗೆ ಚಾಲನೆ ನೀಡಲಿರುವ ನಾದ ಬ್ರಹ್ಮ ಹಂಸಲೇಖ ಅವರು 'ಈಟಿವಿ ಭಾರತ'ದ ಜೊತೆ ಮಾತನಾಡಿದ್ದು, ಸಾಕಷ್ಟು ಸ್ವಾರಸ್ಯಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಬಾರಿಯ ದಸರಾ ಉದ್ಘಾಟನೆ ಮಾಡುವ ಅವಕಾಶ ಸಿಕ್ಕಿರುವುದು ಒಂದು ಅನಿರೀಕ್ಷಿತ ಎನ್ನುತ್ತಲೇ ಮಾತು ಶುರುಮಾಡಿದ ಹಂಸಲೇಖ, ಈ ಸದಾವಕಾಶ ಸಿಕ್ಕಿರುವುದನ್ನು ನನ್ನ ಚಂದನವನದ ಸಿನಿಮಾ ಬರಹಗಾರರಿಗೆ ಅರ್ಪಿಸುತ್ತೇನೆ. ಇದು ಚಂದನವನಕ್ಕೆ ಸಿಕ್ಕ ಗೌರವ ಎಂದು ಸಂತಸ ವ್ಯಕ್ತಪಡಿಸಿದರು.
ಇದಕ್ಕಿಂತ ದೊಡ್ಡ ಪ್ರಶಸ್ತಿ ಇಲ್ಲ:''ನನ್ನ ಜೀವನದ ಪ್ರಯಾಣದಲ್ಲಿ ದಸರಾ ಉತ್ಸವ ಪರಿಪೂರ್ಣ ಆಗಲಿದೆ. ಯಾಕೆಂದರೆ ದಸರಾವನ್ನು ನಾಡಿನ ಸಾಂಸ್ಕೃತಿಕ ಅಸ್ಮಿತೆ ಅಂತಾ ಕರೆಯಲಾಗುತ್ತದೆ. ಆದರೆ ನನ್ನ ದೃಷ್ಟಿಯಲ್ಲಿ ದಸರಾವು ಜೀವಂತ ಮಹಾಕಾವ್ಯ. ಈ ಮಹಾಕಾವ್ಯವು ನಮಗೆ ದಸರಾ ಮೂಲಕ ಸಿಕ್ಕಿದೆ. ಇಂತಹ ಮಹಾಕಾವ್ಯವನ್ನು ಯಾವ ಕವಿಗಳೂ ಬರೆದಿಲ್ಲ. 375 ವರ್ಷಗಳ ಹಿನ್ನೆಲೆಯುಳ್ಳ ದಸರಾ ಬಗ್ಗೆ ದೊಡ್ಡ ಹಿರಣ್ಣಯ್ಯನವರು ಹೇಳುವಂತೆ ಚಿನ್ನದ ಮಳೆ ಸುರಿಸಿದ ಕಾಲ ಅದಾಗಿದೆ. ಅಂತಹ ದಸರಾವನ್ನು ಉದ್ಘಾಟನೆ ಹಾಗೂ ಸಂಗೀತದ ಮೂಲಕ ಸಮಾರೋಪ ಕಾರ್ಯಕ್ರಮ ನಡೆಸಿಕೊಡುವ ಜವಾಬ್ದಾರಿ ಹೆಗಲಿಗೆ ಹೊರಿಸಿರುವುದರಿಂದ ನನ್ನ ಜೀವನದ ಪರಿಪೂರ್ಣವಾಗಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಇನ್ಯಾವುದೂ ಇಲ್ಲ'' ಎಂದು ಹಂಸಲೇಖ ಹೇಳಿದರು.