ವೆಬ್ ಸೀರಿಸ್ಗಳ ಜಮಾನ ಜೋರಾಗಿದೆ. ಈ ಟ್ರೆಂಡ್ ಕನ್ನಡ ಸಿನಿಮಾರಂಗಕ್ಕೂ ಕಾಲಿಟ್ಟಿದೆ. ಜೀಯೋ ಸಿನಿಮಾ ಓಟಿಟಿ ವೇದಿಕೆಯಿಂದ ಮನರಂಜನೆಯ ಹೊಸ ಪರ್ವ ಶುರುಮಾಡಿದೆ. ಅದಿತಿ ಪ್ರಭುದೇವ ಹಾಗು ವಿಕ್ರಮ್ ರವಿಚಂದ್ರನ್ ಮುಖ್ಯಭೂಮಿಕೆಯಲ್ಲಿರೋ ಲವ್ ಯು ಅಭಿ ಎಂಬ ಕನ್ನಡ ವೆಬ್ ಸೀರಿಸ್ ಪ್ರದರ್ಶನಗೊಳ್ಳಲು ಸಜ್ಜಾಗಿದೆ. ಕಾಳಿ ವೇಲಾಯುಧಂ ನಿರ್ಮಾಣ ಮಾಡಿ, ನಿರ್ದೇಶಿಸಿರುವ 'ಲವ್ ಯು ಅಭಿ' ವೆಬ್ ಸಿರೀಸ್ನಲ್ಲಿ ಅದಿತಿ ಪ್ರಭುದೇವ, ವಿಕ್ರಮ್ ರವಿಚಂದ್ರನ್ ಅಲ್ಲದೇ ರವಿಶಂಕರ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ.
ಕನ್ನಡದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೂ ಇದು ಮೊದಲ ವೆಬ್ ಸೀರಿಸ್. ತಮ್ಮ ಪಾತ್ರದ ಕುರಿತು ಬಹಳ ಉತ್ಸಾಹದಿಂದ ಮಾತನಾಡಿದ ವಿಕ್ರಮ್, ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಏಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತವೇ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿ, ಬದುಕಿನ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ ಎಂದು ಶಿವನ ಪಾತ್ರಕ್ಕೆ ಜೀವ ತುಂಬಿದ ವಿಕ್ರಮ್ ರವಿಚಂದ್ರನ್ ತಿಳಿಸಿದರು.
ಕಿರುತೆರೆ ಮತ್ತು ಹಿರಿತೆರೆಗಳಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ ಅದಿತಿ ಪ್ರಭುದೇವ, 'ಲವ್ ಯು ಅಭಿ' ಮೂಲಕ ವೆಬ್ ಸೀರಿಸ್ ಜಗತ್ತಿಗೂ ಜಿಗಿದಿದ್ದಾರೆ. ಇವರಿಬ್ಬರ ಕ್ಯೂಟ್ ಕಾಂಬಿನೇಷನ್ ಜೊತೆ ಖ್ಯಾತ ನಟ ರವಿಶಂಕರ್ ಅವರ ಅಬ್ಬರದ ಮಸಾಲೆಯೂ ಇದೆ. ಪೊಲೀಸ್ ಅಧಿಕಾರಿಯಾಗಿ ರವಿಶಂಕರ್ ಕಾಣಿಸಿಕೊಳ್ಳಲಿದ್ದಾರೆ. ಎಲ್ಲ ಕಲಾವಿದರೂ ತಮ್ಮದೇ ಆದ ರಿದಮ್ನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಮ್ಮೊಮ್ಮೆ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥಹ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೆ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದೇನೆ ಎಂದು ಅದಿತಿ ಪ್ರಭುದೇವ ತಿಳಿಸಿದರು.