ಲವ್ ಮಾಕ್ಟೇಲ್ 2 ಸಿನಿಮಾದ ಅಭೂತಪೂರ್ವ ಯಶಸ್ಸಿನ ನಂತರ ನಟಿ ಮಿಲನಾ ನಾಗರಾಜ್ ಹಾಗೂ ನಟಿ ಅಮೃತಾ ಅಯ್ಯಂಗಾರ್ ಒಟ್ಟಿಗೆ ನಟಿಸಿರುವ ಸಿನಿಮಾ 'ಲವ್'. ನಿರ್ದೇಶಕ ಸಾರಥಿ ಮಹೇಶ್ ಸಿ. ಅಮ್ಮಳ್ಳಿದೊಡ್ಡಿ ಸದ್ದಿಲ್ಲದೇ ಲವ್ ಎಂಬ ಹೊಸ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದು, ಈ ಚಿತ್ರದ ಮೊದಲ ಹಾಡು ಅನಾವರಣಗೊಂಡಿದೆ.
ಕಣ್ಮಣಿ ಹಾಡು ಬಿಡುಗಡೆ: ಕಣ್ಮಣಿ ಎಂಬ ಮಧುರ ಪ್ರೇಮಗೀತೆ ಇದಾಗಿದ್ದು, ನಿರ್ದೇಶಕ ಮಹೇಶ್ ಪದಪುಂಜ ಪೊಣಿಸಿರುವ ಹಾಡಿಗೆ ರೋಸಿತ್ ವಿಜಯನ್ ದನಿಯಾಗಿದ್ದಾರೆ. ಅಲ್ಲದೇ ಸಾಯಿ ಕಿರಣ್ ಜೊತೆಯಾಗಿ ಸಂಗೀತ ನಿರ್ದೇಶಿಸಿದ್ದಾರೆ. ಯುವ ಪ್ರತಿಭೆಗಳಾದ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ್ ಕಣ್ಮಣಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ.
ಲವ್..ಶೀರ್ಷಿಕೆಯೇ ಹೇಳುವಂತೆ ಇದೊಂದು ಪ್ರೇಮಕಥೆಯುಳ್ಳ ಸಿನಿಮಾ. ಈ ಚಿತ್ರದ ಮೂಲಕ ಪ್ರಜಯ್ ಜಯರಾಮ್ ಹಾಗೂ ವೃಷ ಪಾಟೀಲ ನಾಯಕ ಹಾಗೂ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ಕಾಂತಾರ ಸಿನಿಮಾ ಖ್ಯಾತಿಯ ಪ್ರಭಾಕರ್ ಕುಂದರ್ ಬ್ರಹ್ಮಾವರ, ಸತೀಶ್ ಕಾಂತಾರ ಸೇರಿದಂತೆ ಉಮೇಶ್ ಶ್ರೀಕಾಂತ್ ತೇಲಿ, ರಾಧಿಕಾ ಭಟ್, ತಿಲಕ, ಪ್ರಸಾದ್ ಭಟ್, ಹರೀಶ್ ಶೆಟ್ಟಿ, ಸೌರಭ್ ಶಾಸ್ತ್ರೀ ಹಲವರು ಲವ್ ಸಿನಿಮಾದ ಭಾಗವಾಗಿದ್ದಾರೆ.
ನೈಜ ಘಟನೆಗಳನ್ನು ಆಧರಿಸಿ ನಿರ್ಮಿಸಿರುವ ಲವ್ ಸಿನಿಮಾವನ್ನು ಉಡುಪಿ, ಕೋಟ, ಕುಂದಾಪುರ, ಬೈಂದೂರ್, ಬಾಗಲಕೋಟೆ ಮತ್ತು ಬೆಂಗಳಳೂರಿನಲ್ಲಿ ಚಿತ್ರೀಕರಿಸಲಾಗಿದೆ. ಶ್ರೀಕಾಲ ಭೈರವೇಶ್ವರ ಮೂವೀ ಮೇಕರ್ಸ್ ಅಡಿ ದಿವಾಕರ್ ಲವ್ ಚಿತ್ರ ನಿರ್ಮಿಸುತ್ತಿದ್ದು, ಸಿದ್ದಾರ್ಥ್ ಹೆಚ್ ಆರ್ ಛಾಯಾಗ್ರಹಣ, ರೋಸಿತ್ ವಿಜಯನ್, ಶ್ರೀ ಸಾಯಿ ಕಿರಣ್ ಸಂಗೀತ, ಲೋಕೇಶ್ ಪುಟ್ಟೇಗೌಡ ಸಂಕಲನ ಸಿನಿಮಾದ ಶ್ರೀಮಂತಿಕೆ ಹೆಚ್ಚಿಸಿದೆ. ಈಗಾಗಲೇ ಶೂಟಿಂಗ್ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.
ಇದನ್ನೂ ಓದಿ:Oscar Members: ರಾಮ್ ಚರಣ್, ಜೂ. ಎನ್ಟಿಆರ್ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್ ಸದಸ್ಯತ್ವ
ಲವ್ ಮಾಕ್ಟೇಲ್ 2 ಸಿನಿಮಾ ಲವ್ ಮಾಕ್ಟೇಲ್ ಚಿತ್ರದ ಮುಂದುವರಿದ ಭಾಗ. ಈ ಎರಡೂ ಚಿತ್ರಗಳೂ ಸೂಪರ್ ಹಿಟ್ ಆಗಿವೆ. ತಾರಾ ದಂಪತಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ಅವರೇ ಆ್ಯಕ್ಷನ್ ಕಟ್ ಹೇಳಿರುವ ಲವ್ ಮಾಕ್ಟೇಲ್ 2 ಚಿತ್ರ 2022ರ ಫೆಬ್ರವರಿ 11ರಂದು ತೆರೆಕಂಡಿದ್ದು, ಮಿಲನಾ ನಾಗರಾಜ್ ಮತ್ತು ಅಮೃತಾ ಅಯ್ಯಂಗಾರ್ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಈ ನಟಿಮಣಿಯರು ಒಟ್ಟಿಗೆ ನಟಿಸುತ್ತಿರುವ ಚಿತ್ರ 'ಲವ್'. ಹೊಸ ಪ್ರತಿಭೆಗಳ ಈ ಸಿನಿಮಾದಲ್ಲಿ ಲವ್ ಮಾಕ್ಟೇಲ್ ನಟಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೊಸಬರ ಚಿತ್ರ ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ:Satyaprem Ki Katha: ತೆರೆ ಮೇಲಿನ ಕಾರ್ತಿಕ್ ಕಿಯಾರಾ ಪ್ರೇಮಕಥೆಗೆ ಪ್ರೇಕ್ಷಕರ ಪ್ರತಿಕ್ರಿಯೆ ಹೀಗಿದೆ!