ಕನ್ನಡ ಚಿತ್ರರಂಗ ಯಶಸ್ಸಿನ ಹುಮ್ಮಸ್ಸಿನಲ್ಲಿ ಮುನ್ನುಗ್ಗುತ್ತಿದೆ. ಉತ್ತಮ ಕಥಾಹಂದರ, ಅತ್ಯುತ್ತಮ ಮೇಕಿಂಗ್ನಲ್ಲಿ ಸಿನಿಮಾಗಳು ಮೂಡಿಬರುತ್ತಿವೆ. ಯುವ ಕಲಾವಿದರ ಸದಭಿರುಚಿಯ ಸಿನಿಮಾಗಳಿಗೆ ದಿವಂಗತ ನಟ ಪುನೀತ್ ರಾಜ್ಕುಮಾರ್ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬೆಂಬಲ ನೀಡುತ್ತಿದ್ದಾರೆ. ಅದರಂತೆ, ಲವ್ ಬರ್ಡ್ಸ್ ಎಂಬ ಹೊಸ ಚಿತ್ರದ ಸುಮಧುರ ಹಾಡೊಂದನ್ನು ಅಶ್ವಿನಿ ಇತ್ತೀಚೆಗೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನೀನೇ ದೊರೆತ ಮೇಲೆ...: 'ಲವ್ ಬರ್ಡ್ಸ್' ಶೀರ್ಷಿಕೆ ಹಾಗೂ ಟೀಸರ್ ವಿಚಾರಕ್ಕೆ ಸ್ಯಾಂಡಲ್ವುಡ್ ಅಂಗಳದಲ್ಲಿ ಟಾಕ್ ಆಗುತ್ತಿದೆ. ಲವ್ ಮಾಕ್ಟೈಲ್ ಜೋಡಿ ಅಂತಾ ಕರೆಸಿಕೊಂಡಿರುವ ನಟ ಡಾರ್ಲಿಂಗ್ ಕೃಷ್ಣ ಹಾಗು ನಟಿ ಮಿಲನ ನಾಗರಾಜ್ ಒಟ್ಟಿಗೆ ತೆರೆ ಹಂಚಿಕೊಂಡಿರುವ ರೊಮ್ಯಾಂಟಿಕ್ ಚಿತ್ರವಿದು. ರೋಮಿಯೋ ಸಿನಿಮಾ ಖ್ಯಾತಿಯ ಪಿ.ಸಿ.ಶೇಖರ್ ನಿರ್ದೇಶನದ ಲವ್ ಬರ್ಡ್ಸ್ ಚಿತ್ರದ ಸುಮಧುರ ಹಾಡನ್ನು ಅಶ್ವಿನಿ ಪುನೀತ್ ರಾಜ್ಕುಮಾರ್ ರಿಲೀಸ್ ಮಾಡಿದ್ದಾರೆ. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ.ಹರೀಶ್, ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಚಿತ್ರತಂಡಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಕವಿರಾಜ್ ಬರೆದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತವಿದೆ.
ಮದುವೆ ಕುರಿತ ಹಾಡು:ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪಿ.ಸಿ.ಶೇಖರ್, "ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಚಿತ್ರಗಳ ನಿರ್ಮಾಣ ಸ್ವಲ್ಪ ಕಡಿಮೆ ಆಗಿದೆ. ನನಗೆ ಉತ್ತಮ ಕೌಟುಂಬಿಕ ಚಿತ್ರ ನಿರ್ದೇಶಿಸಬೇಕೆಂದು ಆಸೆ ಮೂಡಿತು. ನಿರ್ಮಾಪಕ ಕಡ್ಡಿಪುಡಿ ಚಂದ್ರು ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ತರ ಘಟ್ಟ. ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತವೆ. ಆ ಪ್ರಸಂಗಕ್ಕೆ ತಕ್ಕದಾದ ಹಾಡೊಂದನ್ನು ಕವಿರಾಜ್ ಅದ್ಭುತವಾಗಿ ಬರೆದಿದ್ದಾರೆ. ಅರ್ಜುನ್ ಜನ್ಯ ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಚೆನ್ನಾಗಿ ನಟಿಸಿದ್ದಾರೆ" ಎಂದು ತಿಳಿಸಿದರು.