ಕಾಲಿವುಡ್ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ಆ್ಯಕ್ಷನ್ ಕಟ್ ಹೇಳೋ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸಿಕೊಡೋದು ಪಕ್ಕಾ. ಅದಕ್ಕೆ ಉದಾಹರಣೆಯೇ ಕೈದಿ, ಮಾಸ್ಟರ್, ವಿಕ್ರಮ್. ಇವೆಲ್ಲವೂ ಭಾರತೀಯ ಚಿತ್ರರಂಗದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳು. ಇವರ ಮುಂದಿನ ಚಿತ್ರ 'ಲಿಯೋ'. ದಳಪತಿ ವಿಜಯ್ ನಟಿಸುತ್ತಿರುವ ಈ ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ. ಇದಲ್ಲದೇ ಸೂಪರ್ಸ್ಟಾರ್ ರಜನಿಕಾಂತ್ 171ನೇ ಸಿನಿಮಾಗೆ ಇವರೇ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಆದರೆ, ಲೋಕೇಶ್ ಇನ್ನೇನು ಬೆರಳೆಣಿಕೆಯ ಸಿನಿಮಾಗಳ ನಂತರ ನಿರ್ದೇಶಕನ ಪ್ರಯಾಣಕ್ಕೆ ಅಂತ್ಯ ಹಾಡಲಿದ್ದಾರೆ. ಪ್ಯಾನ್ ಇಂಡಿಯಾ ಪ್ರಭಾಸ್ ಮತ್ತು ಲೋಕೇಶ್ ಕನಕರಾಜ್ ಕಾಂಬೋದಲ್ಲಿ ಚಿತ್ರವೊಂದು ತಯಾರಾಗುತ್ತಿದೆ. 'ಲಿಯೋ' ಬಿಡುಗಡೆಯ ನಂತರ ಈ ಸಿನಿಮಾದ ಕೆಲಸಗಳು ಪ್ರಾರಂಭವಾಗಲಿದೆ. ಸುದೀರ್ಘಕಾಲ ನಿರ್ದೇಶಕನಾಗಿ ಮುಂದುವರೆಯಲು ಇಷ್ಟವಿಲ್ಲ ಎಂದು ಈ ಹಿಂದೆ ಹೇಳಿದ್ದ ಲೋಕೇಶ್ ಕನಕರಾಜ್, ಪ್ರಭಾಸ್ ಅಭಿನಯದ ಈ ಚಿತ್ರದ ಮೂಲಕ ತಮ್ಮ ಆ್ಯಕ್ಷನ್ ಕಟ್ ಪ್ರಯಾಣವನ್ನು ಮುಕ್ತಾಯಗೊಳಿಸುವ ಸಾಧ್ಯತೆಯಿದೆ.
ಲೋಕೇಶ್ ಕನಕರಾಜ್ ನಿರ್ದೇಶಕರಾಗಿ ನಿವೃತ್ತಿ ಹೊಂದುವ ಮೊದಲು ತಮ್ಮ ವೃತ್ತಿಜೀವನದಲ್ಲಿ ಕೇವಲ 10 ಚಿತ್ರಗಳನ್ನು ಮಾತ್ರ ಮಾಡುವ ಯೋಜನೆ ಹಂಚಿಕೊಂಡಿದ್ದಾರೆ. "ನನ್ನ ವೃತ್ತಿಜೀವನದಲ್ಲಿ ಜಾಸ್ತಿ ಸಿನಿಮಾಗಳನ್ನು ಮಾಡಬೇಕು ಎಂಬ ಯಾವುದೇ ಆಲೋಚನೆ ಇಲ್ಲ. ನನ್ನದೊಂದಿಷ್ಟು ಕೊಡುಗೆ ಸಿನಿ ಲೋಕಕ್ಕೆ ಇರಲಿ ಎಂಬ ಉದ್ದೇಶದೊಂದಿಗೆ ಇಂಡಸ್ಟ್ರಿಗೆ ಬಂದೆ. ನಾನು LCU ನಲ್ಲಿ ಮಾತ್ರ ಸಿನಿಮಾಗಳನ್ನು ಮಾಡಲು ಬಯಸುತ್ತೇನೆ. ನಾನು LUC ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಬದುಕಲು ಬಯಸುತ್ತೇನೆ. ನಾನು 10 ಸಿನಿಮಾಗಳನ್ನು ಮಾಡಿ ಅಲ್ಲಿಗೆ ನಿಲ್ಲಿಸಿಬಿಡುತ್ತೇನೆ" ಎಂದು ಹೇಳಿದ್ದಾರೆ.