ಮುಂಬೈ: ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 16ರ ಮುಂದಿನ ಸಂಚಿಕೆಯಲ್ಲಿ ವಿಶೇಷ ಪುಟ್ಟ ಅತಿಥಿ ಕಾರ್ಯಕ್ರಮದ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಕಿರುತೆರೆ ಖ್ಯಾತ ಆ್ಯಂಕರ್, ಕಾಮಿಡಿಯನ್ ಆಗಿರುವ ಭಾರ್ತಿ ಸಿಂಗ್ ಮತ್ತು ಆಕೆಯ ಪತಿ ಹರ್ಷ ಲಿಂಬಚಿಯಾ ತಮ್ಮ ಮುದ್ದು ಮಗನೊಂದಿಗೆ ಈ ಬಾರಿ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಮೊದಲ ಬಾರಿ ಭಾರ್ತಿ ಸಿಂಗ್ ಮಗ ಲಕ್ಷ್ ಲಿಂಬಚಿಯಾ ಬಿಗ್ಬಾಸ್ ವೇದಿಕೆಯಲ್ಲಿ ಮಿಂಚಲಿದ್ದು, ಪುಟ್ಟ ಅತಿಥಿ ಆಗಮನ ಅಭಿಮಾನಿಗಳ ಮನಸೊರೆಗೊಂಡಿದೆ.
ಇನ್ನು ಈ ಸಂಚಿಕೆಯ ತುಣುಕಿನಲ್ಲಿ ಈ ಹಿಂದೆ ಬಿಗ್ ಬಾಸ್ ಮನೆಯಲ್ಲಿ ಸಲ್ಮಾನ್ ಖಾನ್ ನೀಡಿದ ಭರವಸೆಯೊಂದನ್ನು ಭಾರ್ತಿ ನೆನಪಿಸಿದ್ದಾರೆ. ನನಗೆ ಇನ್ನು ನೆನಪಿದೆ ಸಲ್ಮಾನ್ ಖಾನ್ ನನ್ನ ಮಗುವನ್ನು ಚಿತ್ರೋದ್ಯಮಕ್ಕೆ ಪರಿಚಯಿಸುವುದಾಗಿ ತಿಳಿಸಿದ್ದರು ಎಂದಿದ್ದಾರೆ. ಅಲ್ಲದೇ ವೇದಿಕೆಯಲ್ಲಿ ಮಗನೊಂದಿಗೆ ಸಲ್ಮಾನ್ ಭೇಟಿಯಾದ ಭಾರ್ತಿ, ಲಕ್ಷ್ನನ್ನು ಕೆಲವು ಕಾಲ ಹಿಡಿದುಕೊಳ್ಳುವಂತೆ ಮನವಿ ಮಾಡಿರುವುದು ಕಾಣಬಹುದಾಗಿದೆ.
ಉಡುಗೊರೆ ಕೊಟ್ಟ ಸಲ್ಮಾನ್: ಇದೇ ವೇಳೆ, ನಟ ಸಲ್ಮಾನ್ ಲಾಹೋರಿ ಹಬ್ಬದ ಉಡುಗೊರೆಯಾಗಿ ತಮ್ಮ ಕೈಯಲ್ಲಿನ ಟ್ರೇಡ್ ಮಾರ್ಕ್ ಆಗಿರುವ ಬೆಳ್ಳಿ ಬ್ರೆಸ್ಲೆಟ್ ಅನ್ನು ಹರ್ಷ್ಗೆ ವಿಶೇಷ ಉಡುಗೊರೆಯಾಗಿ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಜೋಕ್ ಮಾಡಿರುವ ಭಾರ್ತಿ ಸಲ್ಮಾನ್ಗೆ ಇಷ್ಟೋಂದು ಸಹಾನುಭೂತಿ ಇದ್ದರೆ ಅವರ ಫಾರ್ಮ್ ಹೌಸ್ ಅನ್ನು ಮಗ ಲಕ್ಷ್ಗೆ ವರ್ಗಾಯಿಸುವಂತೆ ತಿಳಿಸಿದ್ದಾರೆ. ಇದಕ್ಕೆ ನಟ ಸಲ್ಮಾನ್ ಸೇರಿದಂತೆ ಸೆಟ್ ಮಂದಿ ನಕ್ಕಿದ್ದಾರೆ.