ಚೆನ್ನೈ (ತಮಿಳುನಾಡು):ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟ ವಿಜಯ್ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ಲಿಯೋ. ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ 'ಲಿಯೋ' ಇದೇ ಅಕ್ಟೋಬರ್ 19 ರಂದು ತೆರೆಗಪ್ಪಳಿಸಲಿದೆ.
ಇನ್ನೆರಡು ದಿನಗಳಲ್ಲಿ ಲಿಯೋ ಬಿಡುಗಡೆ ಆಗಲಿದ್ದು, ಅಭಿಮಾನಿಗಳಿಗೆ ಭರ್ಜರಿ ಸಿನಿಮೀಯ ಅನುಭವಗಳನ್ನು ನೀಡಲು ಚಿತ್ರ ತಯಾರಕರು ಪ್ರಯತ್ನಿಸುತ್ತಿದ್ದಾರೆ. ಹೌದು, ಬಹುನಿರೀಕ್ಷಿತ 'ಲಿಯೋ' ಸಿನಿಮಾ ಹಿಂದಿರುವ ಚಲನಚಿತ್ರ ನಿರ್ಮಾಣ ಸಂಸ್ಥೆ 'ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪ್ರೊಡಕ್ಷನ್' ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆ ಆಗುವ ಮೊದಲ ದಿನ (ಅ. 19) ಬೆಳಗ್ಗೆ 4 ಗಂಟೆಗೆ ಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡುವಂತೆ ಕೋರಿದೆ.
ಅಕ್ಟೋಬರ್ 19 ರಿಂದ ಅಕ್ಟೋಬರ್ 24ರ ವರೆಗೆ ಬೆಳಗ್ಗೆ 7 ಗಂಟೆಗೆ ಲಿಯೋ ಪ್ರದರ್ಶನಕ್ಕೆ ಅವಕಾಶ ನೀಡುವಂತೆಯೂ ಚಿತ್ರ ನಿರ್ಮಾಪಕರು ಮನವಿ ಮಾಡಿದ್ದಾರೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಇತ್ತೀಚಿನ ಸಿನಿಮಾಗಳಾದ ಪಠಾಣ್ ಹಾಗೂ ಜವಾನ್ ಮುಂಬೈನಲ್ಲಿ ಬೆಳಗಿನ ಆರರಿಂದ ಏಳು ಪ್ರದರ್ಶನಗಳೊಂದಿಗೆ ಮತ್ತು ದೆಹಲಿಯಲ್ಲಿ ಆರು ಪ್ರದರ್ಶನಗಳೊಂದಿಗೆ ತೆರೆಕಂಡಿವೆ ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ. ಸಿನಿಮಾಗಳ ಯಶಸ್ಸು ಮುಖ್ಯವಾಗಿ ಮೊದಲ ದಿನದ ಕಲೆಕ್ಷನ್ ಮೇಲೆ ಅವಲಂಬಿತವಾಗಿರುತ್ತದೆ. ಹಾಗಾಗಿ ಸ್ಪೆಷಲ್ ಶೋಗಳನ್ನು ಹೊಂದುವುದು ಮುಖ್ಯ. ಈ ಹಿನ್ನೆಲೆ, ಮುಂಜಾನೆಯ ಶೋಗಳಿಗೆ ಅನುಮತಿ ನೀಡಿ. ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು 'ಸೆವೆನ್ ಸ್ಕ್ರೀನ್ ಸ್ಟುಡಿಯೋಸ್ ಪ್ರೊಡಕ್ಷನ್' ತಮ್ಮ ಅರ್ಜಿಯಲ್ಲಿ ತಿಳಿಸಿದೆ. ಮದ್ರಾಸ್ ಹೈಕೋರ್ಟ್ ಇಂದು ಅರ್ಜಿ ವಿಚಾರಣೆ ನಡೆಸಲಿದೆ.