ಬೆಂಗಳೂರು: ಕಾಲಿವುಡ್ ಸೂಪರ್ಸ್ಟಾರ್ ಥಳಪತಿ ವಿಜಯ್ ನಟನೆಯ ಲೋಕೇಶ್ ಕಂಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ 'ಲಿಯೋ' ಚಿತ್ರ ಈಗಾಗಲೇ ಬಾಕ್ಸ್ ಆಫಿಸ್ನಲ್ಲಿ ಅಬ್ಬರಿಸಿದೆ. ಕಳೆದ ವಾರ ಬಿಡುಗಡೆಯಾದ ಈ ಆಕ್ಷ್ಯನ್ ಥ್ರಿಲ್ಲರ್ ಚಿತ್ರ ತಮಿಳು ಉದ್ಯಮದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಚಿತ್ರ ಎಂಬ ಖ್ಯಾತಿ ಕೂಡ ಪಡೆದಿದೆ. ಸಿನಿಮಾ ಬಿಡುಗಡೆಯಾದಗಿನಿಂದ ಯಶಸ್ವಿ ಪ್ರದರ್ಶನ ತೋರುತ್ತಿರುವ ಚಿತ್ರ ಭಾರತದಲ್ಲಿ ಆರನೇ ದಿನ 32.45 ಕೋಟಿ ಯನ್ನು ಸಂಪಾದಿಸಿದ್ದು, ಏಳನೇ ದಿನಕ್ಕೆ ಸಿನಿಮಾದ ಗಳಿಕೆಯಲ್ಲಿ ಕೊಂಚ ಕಡಿಮೆಯಾಗಿದೆ.
ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಅಂದಾಜಿಸಿದಂತೆ 'ಲಿಯೋ' ಸಿನಿಮಾ ಇದೀಗ ಶೇ 53ರಷ್ಟು ಇಳಿಕೆ ಕಂಡಿದ್ದು, ಎಲ್ಲಾ ಭಾಷೆಗಳಲ್ಲಿ ಚಿತ್ರ 15.01 ಕೋಟಿ ಸಂಪಾದಿಸಿದೆ. ಫಿಲ್ಮ್ನ ದೇಶಿಯ ಒಟ್ಟು ಸಂಗ್ರಹ 264.56 ಕೋಟಿ ಆಗಿದೆ. ಲೋಕೇಶ್ ಸಿನಿಮಾಟಿಕ್ ಯುನಿವರ್ಸ್ (ಎಲ್ಸಿಯು) ಅಡಿ ನಿರ್ಮಾಣವಾದ ಈ ಚಿತ್ರ ಮೊದಲ ದಿನವೇ 64 ಕೋಟಿ ಸಂಪಾದನೆ ಮಾಡುವ ಮೂಲಕ ಸದ್ದು ಮಾಡಿತು. ಎರಡನೇ ದಿನವೂ 35 ಕೋಟಿ, ಮೂರನೇ ದಿನ 39 ಕೋಟಿ ಮತ್ತು ನಾಲ್ಕನೆ ದಿನ 41 ಕೋಟಿ ಹಾಗೂ ಐದನೇ ದಿನ 35 ಕೋಟಿ ರೂ ಸಂಪಾದನೆ ಮಾಡಿತು.
ಹಲವು ದಾಖಲೆ: ತಮಿಳು ಚಿತ್ರರಂಗದಲ್ಲಿ ಈ ವರ್ಷ ಅತಿ ಹೆಚ್ಚು ಸಂಪಾದನೆ ಮಾಡಿದ ಎರಡನೇ ಚಿತ್ರದ ಜೊತೆಗೆ ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಐದನೇ ಸಿನಿಮಾ ಎಂಬ ಹೆಗ್ಗಳಿಕೆ ಕೂಡ ಹೊಂದಿದೆ. ಜೊತೆಗೆ ವಿಜಯ್ ಸಿನಿಮಾ ವೃತ್ತಿಯಲ್ಲೇ ಇದು ಅತಿ ಹೆಚ್ಚು ಸಂಪಾದನೆ ಚಿತ್ರವಾಗಿದೆ. ಆರನೆ ದಿನವಾದ ಅಂದರೆ ವಿಜಯ ದಶಯಮಿಯಂದು ಚಿತ್ರ ತಮಿಳಿನಲ್ಲಿ ಶೇ 65ರಷ್ಟು ಸೀಟು ಭರ್ತಿಯೊಂದಿಗೆ ತೆರೆ ಕಂಡಿದೆ. ವಾರದ ಮಧ್ಯದಲ್ಲಿ ಉತ್ತಮ ಪ್ರದರ್ಶನದ ಕಾಣುವ ಮೂಲಕ ಲೋಕೇಶ್ ಅವರ ನಿರ್ದೇಶನವನ್ನು ಅಭಿಮಾನಿಗಳು ಮೆಚ್ಚಿದ್ದಾರೆ. ತಮಿಳು ನಾಡಿನ ಜೊತೆಯಲ್ಲಿ ಕೇರಳದಲ್ಲೂ ಕೂಡ ಚಿತ್ರ ಗಮನಾರ್ಹ ವಹಿವಾಟುವನ್ನು ನಡೆಸಿದೆ.
ಲೋಕೇಶ್ ಅವರು ತಮ್ಮ ಈ ಹಿಂದಿನ ಸಿನಿಮಾ ಕಮಲ್ ಹಾಸನ್ ಅಭಿನಯದ ವಿಕ್ರಂ ಅನ್ನು ಮೀರಿಸಿದ ಸಿನಿಮಾಟಿಕ್ ಅನುಭವವನ್ನು ತಮ್ಮ ಈ ಚಿತ್ರದಲ್ಲಿ ಪ್ರೇಕ್ಷಕರಿಗೆ ನೀಡಿದ್ದರು. ಈ ಹಿಂದಿನ ತಮ್ಮ ಸಿನಿಮಾವಾದ ನಟ ಕಾರ್ತಿ ಅಭಿನಯದ ಕೈಥಿ ಚಿತ್ರದಲ್ಲಿ ಈ ಸಿನಿಮಾಟಿಕ್ ಅನುಭವ ನೀಡಿದ್ದರು. ಸ್ಯಾಕ್ನಿಲ್ಕ್ ಪ್ರಕಾರ, 'ಲಿಯೋ' ಚಿತ್ರ ತಮಿಳು ಸಿನಿಮಾ ಇತಿಹಾದಲ್ಲಿ ಅತಿ ಹೆಚ್ಚು ಗಳಿಸಿದ ನಾಲ್ಕನೇ ಚಿತ್ರವಾಗಿದೆ. 'ಪೊನ್ನಿಯಿನ್ ಸೆಲ್ವನ್-1', 'ಜೈಲರ್' ಮತ್ತು '2.0' ಬಳಿಕದ ಸ್ಥಾನ ಲಿಯೋ ಪಡೆದಿದೆ.
ಇದನ್ನೂ ಓದಿ:'ಜೈಲರ್' ಖಳನಾಯಕನ ರಿಯಲ್ ಬಂಧನ: ಕಾರಣ ತಿಳಿಸಿದ ಪೊಲೀಸ್ ಅಧಿಕಾರಿಗಳು..