ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಟ ವಿಜಯ್ ಅಭಿನಯದ 'ಲಿಯೋ' ಗುರುವಾರ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಮೊದಲ ದಿನ ಅಭಿಮಾನಿಗಳು ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆದ್ರೆ ಸಿನಿಮಾ ವೀಕ್ಷಿಸಿದವರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಸಿನಿಮಾ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದ್ದು, ಎರಡನೇ ದಿನ ಕೊಂಚ ತಗ್ಗಿತು. ಮೂರನೇ ದಿನ ಉತ್ತಮ ಅಂಕಿಅಂಶ ಹೊಂದಿದ್ದು, ಬಾಕ್ಸ್ ಆಫೀಸ್ ಅಂಕಿಅಂಶಗಳು ವಾರದ ದಿನಗಳಲ್ಲಿ ಇಳಿಮುಖವಾಗುವ ಸಾಧ್ಯತೆಗಳಿವೆ.
ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಮಾಹಿತಿ ಪ್ರಕಾರ, ಚಿತ್ರವು ಮೂರು ದಿನಗಳಲ್ಲಿ ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ 100 ಕೋಟಿ ರೂ. ದಾಟಿದೆ. ನಾಲ್ಕು ದಿನಗಳಲ್ಲಿ (ಇಂದಿನ ಅಂಕಿಅಂಶ ಸೇರಿಸಿ) ಭಾರತೀಯ ಬಾಕ್ಸ್ ಆಫೀಸ್ನಲ್ಲಿ 179.71 ಕೋಟಿ ರೂಪಾಯಿ ಸಂಗ್ರಹಿಸುವ ಸಾಧ್ಯತೆ ಇದೆ. ಲಿಯೋ ಈಗಾಗಲೇ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 200 ಕೋಟಿ ರೂಪಾಯಿಗಳ ಗಡಿ ದಾಟಿದೆ.
ಭಾರತದಲ್ಲಿ ಲಿಯೋ ಮೊದಲ ಶನಿವಾರದಂದು (ವಾರಾಂತ್ಯ) 40 ಕೋಟಿ ರೂಪಾಯಿ ಸಂಗ್ರಹಿಸಿದೆ. ಮೊದಲ ದಿನ 64 ಕೋಟಿ ರೂಪಾಯಿ ಮತ್ತು ಎರಡನೇ ದಿನ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. 4ನೇ ದಿನದಂದು ಅಂದರೆ ಇಂದು ದೇಶೀಯ ಮಾರುಕಟ್ಟೆಯಲ್ಲಿ ಸರಿಸುಮಾರು 40 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಮೊದಲ ದಿನ 64 ಕೋಟಿ ರೂ. ಗಳಿಸಿದ ಚಿತ್ರ ಎರಡನೇ ದಿನ 35 ಕೋಟಿ ರೂಪಾಯಿ ಗಳಿಸಿದ್ದು ಚಿತ್ರದ ಕಲೆಕ್ಷನ್ ಅತಿ ವೇಗವಾಗಿ ಇಳಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದ್ರೆ ವಾರಾಂತ್ಯ ಉತ್ತಮ ಪ್ರದರ್ಶನ ಕೊಡುತ್ತಿದ್ದು, ಶನಿವಾರ 40 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ.