ಶಂಕರ್ನಾಗ್ ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ, ನಿರ್ದೇಶಕ. ಅವರು ಬದುಕಿದ್ದರೆ ಇಂದು 68ನೇ ವರ್ಷದ ಜನ್ಮದಿನ ಆಚರಿಸಿಕೊಳ್ಳುತ್ತಿದ್ದರು. ಸಣ್ಣ ವಯಸ್ಸಿಗೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಅವರು ಕೆಲವೇ ವರ್ಷಗಳಲ್ಲಿ ಸಾಕಷ್ಟು ಸಾಧನೆ ಮಾಡಿದವರು. ಆ ಅವಧಿಯಲ್ಲೇ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಸಂಪಾದಿಸಿದರು. ಇಂದಿಗೂ ಶಂಕ್ರಣ್ಣ ಅಂದ್ರೆ ಬಲು ಅಚ್ಚುಮೆಚ್ಚು ಎನ್ನುವ ಅಭಿಮಾನಿಗಳು, ಸೋಶಿಯಲ್ ಮೀಡಿಯಾದಲ್ಲಿ ಶುಭಾಶಯ ಕೋರುತ್ತಿದ್ದಾರೆ. ಇಹಲೋಕ ತ್ಯಜಿಸಿ 32 ವರ್ಷವಾಗಿದ್ದು, ಅವರನ್ನು ಸ್ಮರಿಸುವ ಕೆಲಸ ಆಗುತ್ತಿದೆ.
ಹಿನ್ನೆಲೆ:ಶಂಕರ್ ನಾಗ್.. ಹೆಸರು ಕೇಳಿದೊಡನೆ ಕನ್ನಡ ಸಿನಿಮಾ ಪ್ರಿಯರಿಗೆ ಒಂದು ರೀತಿಯ ಭಕ್ತಿ, ಗೌರವ. ಆ್ಯಕ್ಟಿಂಗ್ನಲ್ಲಿ ವಿಭಿನ್ನ ಮ್ಯಾನರಿಸಂ, ನಿರ್ದೇಶನದಲ್ಲಿ ಸದಾ ಕ್ರಿಯಾಶೀಲತೆ ತೋರುತ್ತಿದ್ರು ಶಂಕ್ರಣ್ಣ. ಆಟೋ ಚಾಲಕರ ಪ್ರೀತಿಯ ಆಟೋರಾಜ, ಕರಾಟೆ ಕಿಂಗ್ ಶಂಕರ್ ನಾಗ್ ಅವರು 'ಒಂದಾನೊಂದು ಕಾಲದಲ್ಲಿ' ಚಿತ್ರದ ಮೂಲಕ ನಟನೆ ಆರಂಭಿಸಿ ಸುಮಾರು 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅನೇಕ ಸಿನಿಮಾಗಳನ್ನು ನಿರ್ದೇಶಿಸಿದ್ದರು. ನಿರ್ಮಾಪಕರಾಗಿ ಕೂಡಾ ಗುರುತಿಸಿಕೊಂಡಿದ್ದರು.
ನಾಗರಕಟ್ಟೆ ಶಂಕರ್ ಅನ್ನೋದು ಶಂಕರ್ ನಾಗ್ ಮೂಲ ಹೆಸರು. 1954ರ ನವೆಂಬರ್ 9ಕ್ಕೆ ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದರು. ಬಾಲ್ಯದಲ್ಲೇ ಬಹಳ ಚುರುಕಾಗಿದ್ದ ಅವರನ್ನು ಅವರ ತಂದೆ ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್ ನಾಗ್ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು.
ಶಂಕರ್ನಾಗ್ ಸಿನಿಪಯಣ: ಗಿರೀಶ್ ಕಾರ್ನಾಡ್ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ದೊರೆಯಿತು. ಮೊದಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದ ಶಂಕರ್ ನಾಗ್ಗೆ ಒಂದರ ಹಿಂದೊಂದರಂತೆ ಸಿನಿಮಾಗಳ ಆಫರ್ ಬಂದವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶಕನಾಗಿ ಗುರುತಿಸಿಕೊಂಡ ಶಂಕರ್ ನಾಗ್ ಬಳಿಕ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಾಣ ಮಾಡಿದರು.
ಆರ್.ಕೆ. ನಾರಾಯಣನ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ನಾಗ್ ಈ ಧಾರಾವಾಹಿ ಮೂಲಕ ರಾಷ್ಟ್ರಮಟ್ಟದಲ್ಲೂ ಹೆಸರು ಮಾಡಿದರು. 1987ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಈ ಧಾರಾವಾಹಿ, ಹಿಂದಿ ಹಾಗೂ ಇಂಗ್ಲಿಷ್ನಲ್ಲಿ ಪ್ರಸಾರವಾಯ್ತು.