'ಶಂಕರ್ ನಾಗ್'. ಅಮೋಘ ಅಭಿನಯ, ಅಪಾರ ಅಭಿಮಾನಿಗಳು, ಎಲ್ಲಕ್ಕಿಂತ ಮಿಗಿಲಾಗಿ ಕನ್ನಡಿಗರ ಮನದಾಳದಲ್ಲಿ ಅಚ್ಚಳಿಯದ ಹೆಸರು ಈ 'ಆಟೋರಾಜ'. ಇಂದು ದಿ.ಶಂಕರ್ ನಾಗ್ ಅವರ 69ನೇ ಜನ್ಮದಿನವನ್ನು ಅಭಿಮಾನಿಗಳು ವಿಭಿನ್ನವಾಗಿ ಆಚರಿಸುತ್ತಿದ್ದಾರೆ.
ಶಂಕರ್ ನಾಗ್ ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದಿವೆ. ಅವರು ಅಭಿನಯಿಸಿದ ಸಿನಿಮಾಗಳು, ನಿರ್ದೇಶಿಸಿದ ಚಿತ್ರಗಳು ಹಾಗೂ ಕರಾಟೆ ಕಿಂಗ್ಗಿದ್ದ ದೂರದೃಷ್ಟಿ, ಕನ್ನಡ ಚಿತ್ರರಂಗವನ್ನು ಮುಗಿಲೆತ್ತರ ಬೆಳೆಸುವ ಕನಸೆಲ್ಲವನ್ನೂ ಈಗಲೂ ಅಭಿಮಾನಿಗಳ ಸ್ಮರಿಸುತ್ತಾರೆ. ಬಣ್ಣದ ಲೋಕದಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲಿ ಮಿಂಚಿ ಮರೆಯಾದ 'ಆಟೋರಾಜ'ನಿಗೆ ಹ್ಯಾಪಿ ಬರ್ತ್‌ಡೇ.
ಶಂಕರ್ ನಾಗ್ ಮೂಲ ಹೆಸರು ನಾಗರಕಟ್ಟೆ ಶಂಕರ್. 1954ರಲ್ಲಿ ನವೆಂಬರ್ 9ರಂದು ಹೊನ್ನಾವರ ತಾಲೂಕಿನ ಮಲ್ಲಾಪುರ ಗ್ರಾಮದಲ್ಲಿ ಜನಿಸಿದ ಇವರು, ಬಾಲ್ಯದಲ್ಲೇ ಪಾದರಸದಂತೆ ಚುರುಕಾಗಿದ್ದರಂತೆ. ತಂದೆ, ತಾಯಿ ಪ್ರೀತಿಯಿಂದ ಮಗನನ್ನು ಭವಾನಿ ಶಂಕರ ಎಂದು ಕರೆಯುತ್ತಿದ್ದರು. ಅಣ್ಣ ಅನಂತ್ ನಾಗ್ ಅವರೊಂದಿಗೆ ನಾಟಕಗಳನ್ನು ನೋಡಲು ತೆರಳುತ್ತಿದ್ದ ಶಂಕರ್ ನಾಗ್, ಅಣ್ಣನ ಒತ್ತಾಯದ ಮೇರೆಗೆ ತಾವೂ ಕೂಡಾ ರಂಗಭೂಮಿ ಚಟುವಟಿಕೆಗಳಲ್ಲಿ ಭಾಗಿಯಾದರು. ಅಣ್ಣ, ತಮ್ಮ ಇಬ್ಬರೂ ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರೂ ಸಹ ರಂಗಭೂಮಿ ಬಿಟ್ಟಿರಲಿಲ್ಲ.
ಶಂಕರ್ ನಾಗ್ ತಮ್ಮ ಸ್ನೇಹಿತರೊಂದಿಗೆ ವಿದೇಶಕ್ಕೆ ಹೋಗಿ ಏನಾದರೂ ಸಾಧನೆ ಮಾಡಬೇಕೆಂಬ ತುಡಿತ ಹೊಂದಿದ್ದರು. ಇದರ ಹೊರತಾಗಿ ತನ್ನನ್ನು ಕನ್ನಡ ಚಿತ್ರರಂಗ ಕೈಬೀಸಿ ಕರೆಯುತ್ತೆ ಅಂತ ಅಂದುಕೊಂಡಿರಲಿಲ್ಲ. ಕನ್ನಡದ ಪ್ರಸಿದ್ಧ ನಟ ಹಾಗೂ ನಿರ್ದೇಶಕ, ಸಾಹಿತಿ ಗಿರೀಶ್ ಕಾರ್ನಾಡ್ ನಿರ್ದೇಶನದ 'ಒಂದಾನೊಂದು ಕಾಲದಲ್ಲಿ' ಚಿತ್ರದಲ್ಲಿ ಶಂಕರ್ ನಾಗ್ ಅವರಿಗೆ ಅಭಿನಯಿಸುವ ಅವಕಾಶ ಸಿಕ್ಕಿತ್ತು. ಮೊದಲ ಚಿತ್ರದಲ್ಲೇ ಗಮನ ಸೆಳೆದ ಶಂಕರ್ ನಾಗ್ ಮುಂದಿನ ದಿನಗಳಲ್ಲಿ ಒಂದರ ಹಿಂದೊಂದರಂತೆ ಸಿನಿಮಾಗಳು ಸಿಕ್ಕವು. 'ಮಿಂಚಿನ ಓಟ' ಚಿತ್ರದ ಮೂಲಕ ನಿರ್ದೇಶನಕ್ಕೂ ಇಳಿದ ಶಂಕರ್ ನಾಗ್, ನಂತರದಲ್ಲಿ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದರು. ಜನ್ಮಜನ್ಮದ ಅನುಬಂಧ, ಗೀತಾ, ಮಿಂಚಿನ ಓಟ ಸಿನಿಮಾಗಳನ್ನು ನಿರ್ಮಿಸಿದರು.
ಆರ್.ಕೆ.ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕಾದಂಬರಿಯನ್ನು ಮೂಲ ಹೆಸರಿನಲ್ಲೇ ಧಾರಾವಾಹಿಯಾಗಿ ನಿರ್ಮಿಸಿದ ಶಂಕರ್ ನಾಗ್, ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದರು. 1987ರಲ್ಲಿ ದೂರದರ್ಶನದಲ್ಲಿ ಹಿಂದಿ ಹಾಗೂ ಇಂಗ್ಲೀಷ್ನಲ್ಲಿ ಇದು ಪ್ರಸಾರವಾಯಿತು. ಕನ್ನಡಕ್ಕೂ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಯಿತು. ಕನ್ನಡ ಕಲಾವಿದರೇ ನಟಿಸಿದ್ದ ಈ ಧಾರಾವಾಹಿಯನ್ನು ಕರ್ನಾಟಕದ ಶಿವಮೊಗ್ಗ, ಆಗುಂಬೆ ಹಾಗೂ ಇನ್ನಿತರೆ ಸ್ಥಳಗಳಲ್ಲಿ ಚಿತ್ರೀಕರಿಸಲಾಗಿದೆ.