ದೇಶದೆಲ್ಲೆಡೆ ಇಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಯೋಗಾಸಾನ ಅಂದಾಕ್ಷಣ ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ನೆನಪಾಗುತ್ತಾರೆ. ಕಾಮನಬಿಲ್ಲು ಚಿತ್ರದಲ್ಲಿ ನೈಜವಾಗಿ ಯೋಗ ಮಾಡಿ ರಾಜ್ಕುಮಾರ್ ಅವರು ಓರ್ವ ಶ್ರೇಷ್ಠ ನಟ ಮಾತ್ರವಲ್ಲ, ಶ್ರೇಷ್ಠ ಯೋಗಿ ಎಂದೂ ಕೂಡ ಕರೆಸಿಕೊಂಡರು.
ಕಾಮನಬಿಲ್ಲು ಚಿತ್ರದಲ್ಲಿ ರಾಜ್ಕುಮಾರ್ ಯೋಗ: ಹೌದು, ಈ ಸಿನಿಮಾದ ಚಿತ್ರೀಕರಣದ ವೇಳೆ ರಾಜ್ಕುಮಾರ್ ಅವರು ಯೋಗ ಮಾಡುವ ದೃಶ್ಯವನ್ನು ಶೂಟ್ ಮಾಡಬೇಕಿತ್ತಂತೆ. ಮುಂಜಾನೆ ಇಡೀ ಚಿತ್ರತಂಡ ಭಾಗವಹಿಸಿತ್ತು. ನಿರ್ದೇಶಕ ಚಿ ದತ್ತುರಾಜ್, ನಟಿ ಸರಿತಾ ಸೇರಿದಂತೆ ಎಲ್ಲರೂ ಚಳಿಯಲ್ಲಿ ನಡುಗುತ್ತಿದ್ದರು. ಆದ್ರೆ, ರಾಜ್ಕುಮಾರ್ ಅವರು ಮಾತ್ರ ಚಳಿ, ಗಾಳಿ ಲೆಕ್ಕಿಸದೇ ಬಹಳ ಶ್ರದ್ಧೆಯಿಂದ ಯೋಗಾಭ್ಯಾಸ ಮಾಡಿದ್ದರು. ಇದನ್ನು ಕಂಡ ಚಿತ್ರತಂಡ ಆಶ್ಚರ್ಯಗೊಂಡಿತ್ತು.
ಆರೋಗ್ಯ ಕಾಪಾಡಿಕೊಳ್ಳಲು ಯೋಗ:ಡಾ. ರಾಜ್ಕುಮಾರ್ ಅವರು 'ಯೋಗ'ವನ್ನು ಹವ್ಯಾಸದ ಜೊತೆಗೆ, ಜೀವನದ ಒಂದು ಭಾಗವಾಗಿಸಿಕೊಂಡಿದ್ದರು ಎಂಬುದಕ್ಕೆ ಒಂದು ಕಾರಣವಿದೆ. ಸತತ ಶೂಟಿಂಗ್, ಪ್ರಯಾಣ ಎಂದು ಬಳಲಿದ್ದ ರಾಜ್ಕುಮಾರ್ ಅವರಿಗೆ, 1978ರಲ್ಲಿ 'ಅಪರೇಷನ್ ಡೈಮಂಡ್ ರಾಕೇಟ್' ಸಿನಿಮಾದ ನಂತರ ಮಂಡಿ ನೋವು ಕಾಣಿಸಿಕೊಂಡಿತ್ತು. ಈ ಮಂಡಿ ನೋವಿಗೆ ಸಾಕಷ್ಟು ಬಾರಿ ಚಿಕಿತ್ಸೆ ಕೊಡಿಸಿದರೂ ಕೂಡ ಪ್ರಯೋಜನ ಆಗಿರಲಿಲ್ಲ. ಆ ಸಮಯದಲ್ಲಿ ಸಂಬಂಧಿಕರೊಬ್ಬರು ಯೋಗ ಮಾಡಿ ಎಂದು ಸಲಹೆ ಕೊಟ್ಟಿದ್ದರು. ಅದರಂತೆ ರಾಜ್ಕುಮಾರ್ ಅವರು ಯೋಗವನ್ನು ತಮ್ಮ ಹವ್ಯಾಸವಾಗಿಸಿಕೊಂಡರು. ಯೋಗ ಅವರ ಜೀವನದ ಒಂದು ಪ್ರಮುಖ ಭಾಗವಾಗಿತ್ತು.
ಸಾಮಾನ್ಯವಾಗಿ ಓರ್ವ ಮನುಷ್ಯನಿಗೆ 40 ವರ್ಷ ದಾಟುತ್ತಿದ್ದಂತೆ ದೇಹ ದಣಿದ ಅನುಭವ ಕಾಡಲು ಶುರುವಾಗುತ್ತದೆ. ಆದ್ರೆ, ರಾಜ್ಮಾರ್ ಅವರು 50ನೇ ವಯಸ್ಸಿನಲ್ಲೂ ಯೋಗ ಮಾಡುತ್ತಿದ್ದರು. 50 ವರ್ಷ ದಾಟಿದ ಮೇಲೂ ಫಿಟ್ ಆಗಿದ್ದರು, ಗಟ್ಟಿಮುಟ್ಟಾಗಿ ಆರೋಗ್ಯವಾಗಿ ಇದ್ದರು ಅಂದ್ರೆ ಅದಕ್ಕೆ ಯೋಗವೇ ಕಾರಣ.