ಮಂಗಳೂರು (ದಕ್ಷಿಣ ಕನ್ನಡ): ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಮಲ್ಟಿ ಸ್ಟಾರ್ಗಳನ್ನು ಇಟ್ಟುಕೊಂಡು ಸಿನಿಮಾಗಳು ತೆರೆಗೆ ಬಂದಿದೆ. ಆದರೆ, ಸೀಮಿತ ಮಾರುಕಟ್ಟೆ ಇರುವ ಕೋಸ್ಟಲ್ ವುಡ್ನಲ್ಲಿ ಮೊದಲ ಬಾರಿಗೆ ಮಲ್ಟಿ ಸ್ಟಾರ್ಗಳನ್ನಿಟ್ಟುಕೊಂಡು ನಿರ್ಮಾಣವಾಗಿರುವ ಸಿನಿಮಾವೊಂದು ತೆರೆ ಕಾಣಲು ಸಜ್ಜಾಗಿದೆ.
''VIP's ಲಾಸ್ಟ್ ಬೆಂಚ್''ಸಿನಿಮಾದಲ್ಲಿ ಬಿಗ್ ಬಾಸ್ ಸ್ಪರ್ಧಿ ರೂಪೇಶ್ ಶೆಟ್ಟಿ, ಪೃಥ್ವಿ ಅಂಬರ್ ಮತ್ತು ವಿನೀತ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ. ಕಾಮಿಡಿ ಪ್ರಧಾನವಾಗಿರುವ ಈ ಸಿನಿಮಾ ಡಿಸೆಂಬರ್ 16 ರಂದು ಬಿಡುಗಡೆಯಾಗಲಿದೆ. ಮೂವರು ಬೇಜವಾಬ್ದಾರಿ ಹುಡುಗರ ಕಾಲೇಜು ಜೀವನದ ಕಥೆ ಒಳಗೊಂಡಿರುವ ಸಿನಿಮಾವಿದು.
ನಾಲ್ಕು ವರ್ಷಗಳ ಹಿಂದೆ ಚಿತ್ರೀಕರಣ ಮಾಡಲಾಗಿತ್ತು. ಕೊರೊನಾ ಸೇರಿದಂತೆ ಹಲವು ಕಾರಣಗಳಿಂದ ಸಿನಿಮಾ ತೆರೆಗೆ ಬರಲು ವಿಳಂಬವಾಗಿದೆ. ಈ ಸಿನಿಮಾ ಆರಂಭಿಸುವಾಗ ಮೂವರು ನಾಯಕರು ಈಗಿನಷ್ಟು ಪ್ರಸಿದ್ಧರಾಗಿರಲಿಲ್ಲ. ಇದೀಗ ಸೂಪರ್ ಹಿಟ್ ಫಿಲ್ಮ್ ರಾಜ್ ಸೌಂಡ್ಸ್ ಅಂಡ್ ಲೈಟ್ಸ್ ಚಿತ್ರದ ಮೂಲಕ ವಿನೀತ್, ಬಿಗ್ ಬಾಸ್ ಮೂಲಕ ರೂಪೇಶ್ ಶೆಟ್ಟಿ ಮತ್ತು ವಿವಿಧ ಸಿನಿಮಾಗಳ ಮೂಲಕ ಪೃಥ್ವಿ ಅಂಬರ್ ಹೆಸರು ಗಳಿಸಿದ್ದಾರೆ. ಸಿನಿಮಾ ಶೂಟಿಂಗ್ ವೇಳೆ ಇದ್ದ ಸಮಯಕ್ಕಿಂತಲೂ ಈ ಮೂವರು ನಾಯಕರು ಇದೀಗ ಹೆಸರು ಮಾಡಿ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.
ಪ್ರಧಾನ್ ಎಂ ಪಿ ನಿರ್ದೇಶನದ ಈ ಸಿನಿಮಾವನ್ನು ಎ.ಎಸ್ ಪ್ರೊಡಕ್ಷನ್ ಲಾಂಛನದಲ್ಲಿ ಆಶೀಕಾ ಸುವರ್ಣ ನಿರ್ಮಿಸಿದ್ದಾರೆ. ಚಿತ್ರದ ಓರ್ವ ನಾಯಕ ರೂಪೇಶ್ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಇರುವ ಕಾರಣ ಸಿನಿಮಾ ಬಿಡುಗಡೆಗೆ ಅವರು ಭಾಗಿಯಾಗುತ್ತಿಲ್ಲ.