ನ್ಯೂಯಾರ್ಕ್:ದಿ ವೈರ್, ಫ್ರಿಂಜ್ ಮತ್ತು ಜಾನ್ ವಿಕ್ ಖ್ಯಾತಿಯ ಹಾಲಿವುಡ್ ನಟ ಲ್ಯಾನ್ಸ್ ರೆಡ್ಡಿಕ್ ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ರೆಡ್ಡಿಕ್ ಶುಕ್ರವಾರ ಬೆಳಗ್ಗೆ ಹಠಾತ್ತಾಗಿ ಮಲಗಿದ್ದಲ್ಲೇ ನಿಧನರಾಗಿದ್ದಾರೆ. ಇದು ಸಹಜ ಸಾವಾಗಿದೆ ಎಂದು ಅವರ ಸಹಾಯಕಿ ಮಿಯಾ ಹ್ಯಾನ್ಸೆನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ರೆಡ್ಡಿಕ್ ಪತ್ನಿ ಸ್ಟೆಫನಿ ರೆಡ್ಡಿಕ್, ಮಕ್ಕಳಾದ ಯವೊನ್ನೆ ನಿಕೋಲ್ ರೆಡ್ಡಿಕ್ ಮತ್ತು ಕ್ರಿಸ್ಟೋಫರ್ ರೆಡ್ಡಿಕ್ ಅವರನ್ನು ಅಗಲಿದ್ದಾರೆ.
ಲ್ಯಾನ್ಸ್ ರೆಡ್ಡಿಕ್ ನಿಧನ ಸುದ್ದಿ ಹೊರಬೀಳುತ್ತಿದ್ದಂತೆ ಸಿನಿಮಾ ರಂಗ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಆಘಾತ ವ್ಯಕ್ತಪಡಿಸಿದ ಅಭಿಮಾನಿಗಳು ಮತ್ತು ಗಣ್ಯರು, ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಚಲನಚಿತ್ರ ನಿರ್ಮಾಪಕ ಜೇಮ್ಸ್ ಗನ್ ಟ್ವೀಟ್ ಮಾಡಿ, ರೆಡ್ಡಿಕ್ "ವಿಸ್ಮಯಕಾರಿಯಾದ ಒಳ್ಳೆಯ ವ್ಯಕ್ತಿ ಮತ್ತು ಪ್ರತಿಭಾವಂತ ನಟ" ಎಂದು ಬಣ್ಣಿಸಿದರೆ, ದಿ ವೈರ್ ಸಿನಿಮಾದಲ್ಲಿ ಸಹನಟನಾಗಿದ್ದ ವೆಂಡೆಲ್ ಪಿಯರ್ಸ್ "ಆತನೊಬ್ಬ ಮಹಾನ್ ಶಕ್ತಿ ಮತ್ತು ಗ್ರೇಸ್ವುಳ್ಳ ವ್ಯಕ್ತಿ. ನಟರು ಮಾತ್ರವಲ್ಲದೇ ಉತ್ತಮ ಸಂಗೀತಗಾರ ಕೂಡ ಆಗಿದ್ದರು" ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ರೆಡ್ಡಿಕ್ ಸಿನಿಮಾ ಬದುಕು:ರೆಡ್ಡಿಕ್ ತನ್ನ ವೃತ್ತಿಜೀವನದಲ್ಲಿ ಆ್ಯಕ್ಷನ್ ಸಿನಿಮಾಗಳಿಗೆ ಖ್ಯಾತರಾಗಿದ್ದರು. ಸೂಟ್ ಅಥವಾ ಗರಿಗರಿ ಸಮವಸ್ತ್ರ ಧರಿಸಿ, ಎತ್ತರದ ಟ್ಯಾಸಿಟರ್ನ್ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದರು. HBO ಸರಣಿಯ ಸೂಪರ್ ಹಿಟ್ ಸಿನಿಮಾ ದಿ ವೈರ್‌ನಲ್ಲಿ ಲೆಫ್ಟಿನೆಂಟ್ ಸೆಡ್ರಿಕ್ ಡೇನಿಯಲ್ಸ್ ಪಾತ್ರದಿಂದ ಅವರು ಹೆಚ್ಚು ಹೆಸರುವಾಸಿಯಾಗಿದ್ದರು.