ಕಾಲಿವುಡ್ ಹಿರಿಯ ನಟ ರಜನಿಕಾಂತ್ ಅವರ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ಲಾಲ್ ಸಲಾಂ'. 'ಜೈಲರ್' ಯಶಸ್ಸಿನಲ್ಲಿರುವ ಸ್ಟಾರ್ನ ಮುಂದಿನ ಸಿನಿಮಾಗಳ ಮೇಲೆ ಅಭಿಮಾನಿಗಳು ಅಪಾರ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಇದೀಗ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ಸೂಪರ್ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿದ್ದಾರೆ. 'ಲಾಲ್ ಸಲಾಂ' ಚಿತ್ರವನ್ನು ತಲೈವಾ ಪುತ್ರಿ ಐಶ್ವರ್ಯಾ ರಜನಿಕಾಂತ್ ನಿರ್ದೇಶನ ಮಾಡಿದ್ದಾರೆ.
ಟೀಸರ್ ಹೇಗಿದೆ?: 'ಲಾಲ್ ಸಲಾಂ' ಟೀಸರ್ ಅನ್ನು ದೀಪಾವಳಿ ಹಬ್ಬದ ಸಲುವಾಗಿ ಚಿತ್ರತಂಡ ಹಂಚಿಕೊಂಡಿದೆ. ಸಿನಿಮಾದಲ್ಲಿ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಕ್ರಿಕೆಟ್ ಪಂದ್ಯದೊಂದಿಗೆ ಟೀಸರ್ ಪ್ರಾರಂಭವಾಗುತ್ತದೆ. ಅಲ್ಲಿ ಕ್ರೀಡಾ ನಿರೂಪಕ, ಇದು ಕೇವಲ ಆಟವಲ್ಲ, ಬದಲಿಗೆ ಯುದ್ಧ ಎಂದು ಹೇಳುತ್ತಾನೆ. ಮೊಯ್ದೀನ್ ಭಾಯ್ ಪಾತ್ರದಲ್ಲಿ ರಜನಿಕಾಂತ್ ಅವರನ್ನು ಅದ್ಧೂರಿಯಾಗಿ ಪರಿಚಯಿಸಲಾಗಿದೆ. 'ನೀವು ಕ್ರೀಡೆಯೊಂದಿಗೆ ಧರ್ಮವನ್ನು ಬೆರೆಸಿದ್ದೀರಿ. ನೀವು ಜನರ ಮನಸ್ಸನ್ನು ಕೆಡಿಸಿದ್ದೀರಿ' ಎಂದು ರೋಷದಿಂದ ಹೇಳುವ ರಜನಿಯನ್ನು ನೀವು ಕಾಣಬಹುದು. ಟೀಸರ್ ಸಿನಿಮಾ ಬಗ್ಗೆ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಪೃಥ್ವಿರಾಜ್ ಸುಕುಮಾರನ್ ನಿರ್ದೇಶನ, ಮೋಹನ್ಲಾಲ್ ನಟನೆಯ 'L2E - ಎಂಪುರಾನ್' ಫಸ್ಟ್ ಲುಕ್ ಔಟ್
ಏಳು ವರ್ಷಗಳ ಗ್ಯಾಪ್ ನಂತರ ಐಶ್ವರ್ಯಾ ರಜನಿಕಾಂತ್ 'ಲಾಲ್ ಸಲಾಂ' ಚಿತ್ರದ ಮೂಲಕ ಮತ್ತೆ ನಿರ್ದೇಶನಕ್ಕೆ ಮರಳಿದ್ದಾರೆ. ಅವರ ಹಿಂದಿನ ನಿರ್ದೇಶನದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ವೈ ರಾಜಾ ವೈ'ನಲ್ಲಿ ನಟ ಧನುಷ್ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಲಾಲ್ ಸಲಾಂ' ಕ್ರಿಕೆಟ್ ಮತ್ತು ಕಮ್ಯುನಿಸಂನ ಸುತ್ತ ಸುತ್ತುತ್ತದೆ ಎಂದು ಹೇಳಲಾಗಿದೆ. ಸಿನಿಮಾದಲ್ಲಿ ರಜನಿಕಾಂತ್ ಜೊತೆ ವಿಷ್ಣು ವಿಶಾಲ್ ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಕ್ರಿಕೆಟ್ ದಿಗ್ಗಜ ಕಪಿಲ್ ದೇವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟಾಲಿವುಡ್ ತಾರೆ ಜೀವಿತಾ ರಾಜಶೇಖರ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. 33 ವರ್ಷಗಳ ನಂತರ ಅವರು ಬೆಳ್ಳಿ ತೆರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.
ಪಿರಿಯಾಡಿಕಲ್ ಡ್ರಾಮಾವಾಗಿ ತಯಾರಾಗುತ್ತಿರುವ ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನೀಡುತ್ತಿದ್ದಾರೆ. 'ಲಾಲ್ ಸಲಾಂ' ಚಿತ್ರವು ಮುಂದಿನ ವರ್ಷ ಜನವರಿ ತಿಂಗಳ ಆರಂಭದಲ್ಲಿ ಪೊಂಗಲ್ ಹಬ್ಬದ (ಸಂಕ್ರಾಂತಿ) ಸಮಯದಲ್ಲಿ ಬಿಡುಗಡೆಯಾಗಲಿದೆ. ಹೀಗಾಗಿ ಜನವರಿ 12ರಂದು ಬಿಡುಗಡೆಯಾಗಲಿರುವ ಮಹೇಶ್ ಬಾಬು ಅವರ ಗುಂಟೂರು ಖಾರಂ ಮತ್ತು ಜನವರಿ 13ರಂದು ತೆರೆ ಕಾಣಲಿರುವ ರವಿತೇಜ ನಟನೆಯ ಈಗಲ್ ಚಿತ್ರಕ್ಕೆ ಪೈಪೋಟಿ ನೀಡಲಿದೆ. ಚಿತ್ರವು ತಮಿಳು, ತೆಲುಗು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆಗಲಿದೆ.
ಇದನ್ನೂ ಓದಿ:ಪ್ರಭಾಸ್ ಪೋಸ್ಟರ್ ರಿಲೀಸ್: ಡಿ. 1ರಂದು 'ಸಲಾರ್' ಟ್ರೇಲರ್ ಅನಾವರಣ