ಸೌತ್ ಸ್ಟಾರ್ ನಟಿ ಸಮಂತಾ ರುತ್ ಪ್ರಭು ಮತ್ತು ಸೌತ್ ಸೆನ್ಸೇಶನಲ್ ಸ್ಟಾರ್ ವಿಜಯ್ ದೇವರಕೊಂಡ ಮುಖ್ಯಭೂಮಿಕೆಯ ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾ 'ಕುಶಿ'. ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಚಿತ್ರ ತಯಾರಕರು ಇಂದು ಟ್ರೇಲರ್ ಅನಾವರಣಗೊಳಿಸಿ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.
ಕುಶಿ ಟ್ರೇಲರ್ ಅನಾವರಣ: ಶಿವ ನಿರ್ವಾಣ ಆ್ಯಕ್ಷನ್ ಕಟ್ ಹೇಳಿರುವ ಕುಶಿ ಸಿನಿಮಾ ಒಂದು ಅದ್ಭುತ ಪ್ರೇಮಕಥೆ ಹೇಳಲು ಸಜ್ಜಾಗಿದೆ. ಮುಂದಿನ ಸೆಪ್ಟೆಂಬರ್ 1ಕ್ಕೆ ಸಿನಿಮಾ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಸಿನಿಮಾ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ, ಚಿತ್ರತಂಡ ಪ್ರಚಾರ ಪ್ರಾರಂಭಿಸಿದೆ. ಪ್ರಮೋಶನ್ ಭಾಗವಾಗಿ ಇಂದು ನಡೆದ ಅದ್ಧೂರಿ ಈವೆಂಟ್ನಲ್ಲಿ ಕುಶಿ ಟ್ರೇಲರ್ ಅನ್ನು ಅನಾವರಣಗೊಳಿಸಲಾಯಿತು. 2 ನಿಮಿಷ 41 ಸೆಕೆಂಡ್ಸ್ ಇರುವ 'ಕುಶಿ' ಟ್ರೇಲರ್ ಸಂಪೂರ್ಣ ಆಕರ್ಷಕವಾಗಿದೆ.
ಸೆ. 1ಕ್ಕೆ ಬಹುಭಾಷೆಗಳಲ್ಲಿ ಕುಶಿ ಬಿಡುಗಡೆ: ಸೆಪ್ಟೆಂಬರ್ 1 ರಂದು ತೆಲುಗು, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಎರಡನೇ ಬಾರಿ ತೆರೆ ಹಂಚಿಕೊಂಡಿದ್ದಾರೆ. ಮಹಾನಟಿ ಸಿನಿಮಾದಲ್ಲಿ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟಿ ಸಮಂತಾ ರುತ್ ಪ್ರಭು ಈ ಹಿಂದೆ ಮಜಿಲಿ ಚಿತ್ರದಲ್ಲಿ ನಿರ್ದೇಶಕ ಶಿವ ನಿರ್ವಾಣ ಅವರೊಂದಿಗೆ ಕೆಲಸ ಮಾಡಿದ್ದರು.
ಕಂಪ್ಲೀಟ್ ಲವ್ ಸ್ಟೋರಿ ಸಿನಿಮಾ 'ಕುಶಿ'... ಸಂಪೂರ್ಣ ಪ್ರೇಮಕಥೆ ಆಗಿರುವ ಈ ಕುಶಿ ಸಿನಿಮಾ ಸದ್ಯ ಟ್ರೇಲರ್ ಮೂಲಕ ಪ್ರೇಕ್ಷಕರನ್ನು ಆಕರ್ಷಿಸಿದೆ. ವೀಕ್ಷಕರನ್ನು ಪ್ರೇಮದಲೆಯಲ್ಲಿ ತೇಲಿಸುತ್ತಿದೆ. ಜೋಡಿಯ ಪ್ರೇಮ ಪ್ರಯಾಣ, ವಿಭಿನ್ನ ಆಚರಣೆಗಳಿಗೆ ಒಗ್ಗಿಕೊಳ್ಳೋದು, ಎದುರಾಗುವ ಸವಾಲುಗಳು, ಕಥೆಯಲ್ಲಿನ ಟ್ವಿಸ್ಟ್ ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಕುಶಿ ಟ್ರೇಲರ್ ಅನಾವರಣಗೊಳ್ಳುತ್ತಿದ್ದಂತೆ ಇಬ್ಬರು ಬಹುಬೇಡಿಕೆ ಕಲಾವಿದರ ಅಭಿಮಾನಿಗಳು ಲವ್, ಫೈಯರ್ ಸಿಂಬಲ್ನೊಂದಿಗೆ ಕಾಮೆಂಟ್ ಸೆಕ್ಷನ್ನಲ್ಲಿ ಬ್ಯುಸಿಯಾಗಿದ್ದಾರೆ.