ದಕ್ಷಿಣದ ಟಾಪ್ ನಟಿ ಸಮಂತಾ ರುತ್ ಪ್ರಭು ಮತ್ತು ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಅಭಿನಯದ ಬಹುನಿರೀಕ್ಷಿತ ಚಿತ್ರ "ಖುಷಿ". ಚಿತ್ರತಂಡ ಇಂದು ಸಿನಿಮಾದ ಮೊದಲ ಹಾಡಿನ ಪೋಸ್ಟರ್ ಅನ್ನು ಅನಾವರಣಗೊಳಿಸಿದೆ. ರೊಮ್ಯಾಂಟಿಕ್ ಟ್ರ್ಯಾಕ್ನಂತೆ ತೋರುತ್ತಿರುವ ಈ ಹಾಡು ಶೀಘ್ರದಲ್ಲೇ ತೆರೆ ಕಾಣಲಿದೆ.
ಕಾಶ್ಮೀರದಲ್ಲಿ ಹಿಮದ ನಡುವೆ ಸಮಂತಾ ಮತ್ತು ವಿಜಯ್ ದೇವರಕೊಂಡ ಪ್ರೀತಿಯಲ್ಲಿ ಸೋತಿರುವುದನ್ನು ಪೋಸ್ಟರ್‌ನಲ್ಲಿ ಕಾಣಬಹುದು. ಈ ಹಾಡು ಪ್ರೇಮಕಥೆ ಒಳಗೊಂಡಿರಲಿದೆ. ಖುಷಿ ಸಿನಿಮಾ ಸಮಂತಾ ಮತ್ತು ವಿಜಯ್ ಕೆಲಸ ಮಾಡುತ್ತಿರುವ ಎರಡನೇ ಚಿತ್ರ. ಇದಕ್ಕೂ ಮೊದಲು ಮಹಾನಟಿ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೇ ನಿರ್ದೇಶಕ ಶಿವ ನಿರ್ವಾಣ ಅವರೊಂದಿಗೆ ಸಮಂತಾ ಕೆಲಸ ಮಾಡುತ್ತಿರುವ ಎರಡನೇ ಪ್ರೊಜೆಕ್ಟ್ ಇದು. ಈ ಹಿಂದೆ "ಮಜಿಲಿ" ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.
ಚಿತ್ರದ ನಿರ್ಮಾಪಕರು ಟ್ವಿಟರ್‌ನಲ್ಲಿ ಇಂದು ಪೋಸ್ಟರ್ ಹಂಚಿಕೊಂಡಿದ್ದಾರೆ. ಮೇ 9ರಂದು ವಿಜಯ್ ದೇವರಕೊಂಡ ಅವರ ಹುಟ್ಟುಹಬ್ಬ ಇರುವ ಹಿನ್ನೆಲೆ ಅಂದು ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಸಮಂತಾ ಮತ್ತು ವಿಜಯ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟರ್ ಹಂಚಿಕೊಂಡಿದ್ದಾರೆ. ಸಮಂತಾ ಶೇರ್ ಮಾಡಿರುವ ಪೋಸ್ಟರ್ಗೆ "ಖುಷಿ" ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
ಈ ಪ್ರೇಮಕಥೆಯ ಹಾಡನ್ನು ಹೇಶಮ್ ಅಬ್ದುಲ್ ಸಂಯೋಜಿಸಿದ್ದಾರೆ. ತೆಲುಗಿನಲ್ಲಿ 'ನಾ ರೋಜಾ ನುವ್ವೆ', ಹಿಂದಿಯಲ್ಲಿ 'ತು ಮೇರಿ ರೋಜಾ', ತಮಿಳಿನಲ್ಲಿ 'ಎನ್ ರೋಜಾ ನೀಯೆ', ಕನ್ನಡದಲ್ಲಿ 'ನನ್ನ ರೋಜಾ ನೀನೆ' ಮತ್ತು ಮಲಯಾಳಂನಲ್ಲಿ 'ಎನ್ ರೋಜಾ ನೀನೆ' ಎಂದು ಹಾಡು ಬಿಡುಗಡೆ ಆಗಲಿದೆ. ಬಹು ನಿರೀಕ್ಷಿತ ಸಿನಿಮಾದ ಈ ಲವ್ ಸಾಂಗ್ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.