ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುತ್ತ ಸ್ಟಾರ್ ಪಟ್ಟ ಅಲಂಕರಿಸಿದ ನಟ ಗೋಲ್ಡನ್ ಸ್ಟಾರ್ ಗಣೇಶ್. ಬಹು ಸಮಯದಿಂದ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಾಮಿಡಿ ಶೋ ಮಾಡುತ್ತ ಬಳಿಕ ಕನ್ನಡ ಬೆಳ್ಳಿ ತೆರೆಯಲ್ಲಿ ಮಿಂಚಿ, ಮುಂಗಾರು ಮಳೆ ಸಿನಿಮಾದಿಂದ ಸ್ಟಾರ್ ಗಿರಿ ಸಂಪಾದಿಸಿದ ಗಣೇಶ್ ಅವರಿಗೆ ಜುಲೈ 2 ಹುಟ್ಟಿದ ದಿನ. ಅಂದರೆ ನಾಳೆ ಗಣಿ ಅಭಿಮಾನಿಗಳಿಗೆ ಸಂಭ್ರಮದ ದಿನ.
ಫಸ್ಟ್ ಲುಕ್ ಅನಾವರಣ:ತ್ರಿಬಲ್ ರೈಡಿಂಗ್ ಚಿತ್ರದ ಬಳಿಕ ಬಾನದಾರಿಯಲ್ಲಿ ಸಿನಿಮಾದ ಜಪ ಮಾಡುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಈ ವರ್ಷದ ಬರ್ತ್ ಡೇ ಸ್ಪೆಷಲ್ ಆಗಿರಲಿದೆ. ಅವರ ಹೊಸ ಸಿನಿಮಾ ಈಗಾಗಲೇ ಸೆಟ್ಟೇರಿದ್ದು, ಜನ್ಮದಿನಕ್ಕೂ ಒಂದು ದಿನ ಮೊದಲೇ ಸಿನಿಮಾದ ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡ ವಿಶೇಷವಾಗಿ ಶುಭ ಕೋರಿದೆ. ಈ ಮೂಲಕ ಕನ್ನಡದ ಬಹುಬೇಡಿಕೆ ನಟನಿಗೆ ಸ್ಪೆಷಲ್ ಗಿಫ್ಟ್ ಸಿಕ್ಕಿದೆ.
'ಕೃಷ್ಣಂ ಪ್ರಣಯ ಸಖಿ':ಗೋಲ್ಡನ್ ಸ್ಟಾರ್ ಗಣೇಶ್ ನಟಿಸುತ್ತಿರುವ ಮುಂದಿನ ಸಿನಿಮಾದ ಹೆಸರು 'ಕೃಷ್ಣಂ ಪ್ರಣಯ ಸಖಿ'. ಗಣೇಶ್ ನಟನೆಯ 41 ನೇ ಚಿತ್ರವಿದು. ಈಗಾಗಲೇ ದಂಡುಪಾಳ್ಯ ಅಂತಹ ಚಿತ್ರಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ಶ್ರೀನಿವಾಸರಾಜು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಗಣೇಶ್ ಹುಟ್ಟುಹಬ್ಬದ ಅಂಗವಾಗಿ ಕೃಷ್ಣಂ ಪ್ರಣಯ ಸಖಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಗಣಿಗೆ ಚಿತ್ರತಂಡ ಶುಭಕೋರಿದೆ. ಕೌಟುಂಬಿಕ ಕಥಾಹಂದರ ಹೊಂದಿರುವ ಈ ಚಿತ್ರದ ಶೂಟಿಂಗ್ ಸದ್ಯ ಬೆಂಗಳೂರಿನಲ್ಲಿ ನಡೆಯುತ್ತಿದೆ. ಮುಂಬರುವ ದಿನಗಳಲ್ಲಿ ಮೈಸೂರು, ರಾಜಸ್ಥಾನ ಹಾಗೂ ಯುರೋಪ್ನಲ್ಲಿ ಚಿತ್ರೀಕರಣ ನಡೆಯಲಿದೆ.