ಕಳ್ಳರ ಸಂತೆ, ಆ ದಿನಗಳು, ಎದೆಗಾರಿಕೆ ಹಾಗೂ ಹೆಡ್ ಬುಷ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ರೀತಿಯ ಛಾಪು ಮೂಡಿಸಿರುವ ಬರಹಗಾರ ಅಗ್ನಿ ಶ್ರೀಧರ್. ರೌಡಿಸಂ ಕಥೆಗಳನ್ನೇ ಹೆಚ್ಚಾಗಿ ಬರೆಯುವ ಇವರೀಗ ಅಧಿಕಾರ ಹಾಗೂ ಹಣಕ್ಕಾಗಿ ಕೆಲವು ವ್ಯಕ್ತಿಗಳು ಮಾಡುವ ಹತ್ಯೆಯ ಕಥಾನಕ ಹೇಳಹೊರಟಿದ್ದಾರೆ. ಸಿನಿಮಾದ ಹೆಸರು 'ಕ್ರೀಂ'.
ಕಿರಿಕ್ ಪಾರ್ಟಿ, ಕಾಲೇಜ್ ಕುಮಾರ ಚಿತ್ರಗಳಲ್ಲಿ ಗಮನ ಸೆಳೆದಿರುವ ನಟಿ ಸಂಯುಕ್ತ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಗ್ನಿ ಶ್ರೀಧರ್ ಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನವಿದೆ. ಚಿತ್ರತಂಡದ ಸದಸ್ಯರು ಇತ್ತೀಚೆಗೆ ಪತ್ರಿಕಾಗೋಷ್ಟಿಯಲ್ಲಿ ಮಹಿಳಾ ಪ್ರಧಾನ ಚಿತ್ರದ ಕುರಿತು ಮಾಹಿತಿ ನೀಡಿದರು.
ಮೊದಲಿಗೆ ಮಾತನಾಡಿದ ನಿರ್ದೇಶಕ ಅಭಿಷೇಕ್ ಬಸಂತ್, "ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಸಿನಿಮಾ ಮಾಡಲು ನನಗೆ ರೋಷನ್ ಸೇರಿದಂತೆ ಸಾಕಷ್ಟು ಮಂದಿ ಸಹಕಾರ ನೀಡಿದ್ದಾರೆ. ಅಗ್ನಿ ಶ್ರೀಧರ್ ಕಥೆ ಬರೆದಿದ್ದಾರೆ. ಮುಖ್ಯವಾಗಿ ಕಥೆ ಬರೆದಿರುವವರಿಗೆ ನಿರ್ದೇಶನ ಇಷ್ಟವಾಗಬೇಕು. ಆ ನಿಟ್ಟಿನಲ್ಲಿ ನಾನು ಗೆದ್ದಿದ್ದೇನೆ ಅಂದುಕೊಳ್ಳಬಹುದು. ಚಿತ್ರ ಉತ್ತಮವಾಗಿ ಮೂಡಿಬರಲು ಎಲ್ಲವನ್ನೂ ಒದಗಿಸುತ್ತಿರುವ ನಿರ್ಮಾಪಕ ದೇವೇಂದ್ರ ಅವರಿಗೆ ಧನ್ಯವಾದ" ಎಂದು ತಿಳಿಸಿದರು.
"ನಮ್ಮ ಚಿತ್ರಕ್ಕೆ ಸಂಯುಕ್ತ ಹೆಗ್ಡೆ ಅವರನ್ನು ಬಿಟ್ಟು ಬೇರೆ ಯಾರನ್ನೂ ನಾಯಕಿಯ ಪಾತ್ರಕ್ಕೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಚಿತ್ರಕ್ಕಾಗಿ ಅವರು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯ. ಸಾಹಸ ದೃಶ್ಯದಲ್ಲಿ ಅಭಿನಯಿಸುವಾಗ ಅವರ ಕಾಲಿಗೆ ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಕೆಲವು ತಿಂಗಳುಗಳೇ ಆಯಿತು. ಆ ನಂತರ ಕೂಡ ಅವರು ಮೊದಲಿನ ಹುಮ್ಮಸಿನಿಂದಲೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸದ್ಯ ಚಿತ್ರೀಕರಣ ಮುಕ್ತಾಯವಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ" ಎಂದರು.
ವೇಶ್ಯೆ ಪಾತ್ರದಲ್ಲಿ ಸಂಯುಕ್ತ ಹೆಗ್ಡೆ ಸಂಯುಕ್ತ ಹೆಗ್ಡೆ ಮಾತನಾಡಿ, "ಈ ಸಿನಿಮಾಗಾಗಿ ನಾನು ಶೇ. 200ರಷ್ಟು ಎಫರ್ಟ್ ಹಾಕಿದ್ದೇನೆ. ಚಿತ್ರೀಕರಣ ಸಮಯದಲ್ಲಿ ಕಾಲಿಗೆ ತೀವ್ರವಾಗಿ ಪೆಟ್ಟಾಯಿತು. ನಾನು ಎರಡು ತಿಂಗಳು ಮನೆಯಲ್ಲೇ ಇದ್ದು, ವಿಶ್ರಾಂತಿ ಪಡೆದಿದ್ದೆ. ಫಿಸಿಯೋ ಥೆರಪಿ ಮಾಡಿಸಿಕೊಳ್ಳಬೇಕಾದರೆ ನಾನು ಪಟ್ಟ ನೋವು ಅಷ್ಟಿಷ್ಟಲ್ಲ. ಚಿತ್ರಕ್ಕಾಗಿ ನಾನು ಬೆವರು ಮಾತ್ರ ಹರಿಸಿಲ್ಲ, ರಕ್ತವನ್ನೂ ಹರಿಸಿದ್ದೇನೆ. ಇಷ್ಟೆಲ್ಲ ಶ್ರಮ ಪಟ್ಟರೂ, ಒಂದೊಳ್ಳೆ ಸಿನಿಮಾದಲ್ಲಿ ನಟಿಸಿದ ತೃಪ್ತಿ ಇದೆ" ಎಂದರು.
ಇದನ್ನೂ ಓದಿ:ರ‍್ಯಾಪರ್ ಹನಿ ಸಿಂಗ್ ವಿರುದ್ಧ ಕಿಡ್ನಾಪ್, ಹಲ್ಲೆ ಆರೋಪ: ಪ್ರಕರಣ ದಾಖಲು!
ಕಥೆಗಾರ ಅಗ್ನಿ ಶ್ರೀಧರ್ ಮಾತನಾಡಿ, "ಕ್ರೀಂ ಎಂದರೆ ಕಾಳಿ ಮಾತೆಯನ್ನು ಆರಾಧಿಸುವ ಬೀಜಾಕ್ಷರಿ ಮಂತ್ರ. ದೇಶದಲ್ಲಿ ಪ್ರತಿ ತಿಂಗಳು 400ಕ್ಕೂ ಹೆಚ್ಚು ಮಹಿಳೆಯರ ಹತ್ಯೆಯಾಗುತ್ತಿದೆ. ಮಕ್ಕಳೂ ಕಣ್ಮರೆಯಾಗುತ್ತಿದ್ದಾರೆ. ಈ ಪ್ರಕರಣಗಳ ಹಿಂದೆ ಯಾರಿದ್ದಾರೆ? ಏಕೆ ಮಾಡುತ್ತಿದ್ದಾರೆ? ಎನ್ನುವ ಅಂಶವನ್ನಿಟ್ಟುಕೊಂಡು ಕಥೆ ಬರೆದಿದ್ದೇನೆ. ಸಂಯುಕ್ತ ಹೆಗ್ಡೆ ಅವರದ್ದು ಇದರಲ್ಲಿ ವೇಶ್ಯೆ ಪಾತ್ರ. ಈ ಚಿತ್ರದ ಬಗ್ಗೆ ಕೂಡ ಕೆಲವು ವಿವಾದಗಳು ಬರಬಹುದು. ಎದುರಿಸಲು ನಾನು ಸಿದ್ಧ" ಎಂದರು.
ಇದನ್ನೂ ಓದಿ:ಖಡಕ್ ಪೊಲೀಸ್ ಅಧಿಕಾರಿಯಾಗಿ ಸೋನಾಕ್ಷಿ ಸಿನ್ಹಾ: 'ದಹಾದ್' ಪ್ರಸಾರಕ್ಕೆ ಮುಹೂರ್ತ ಫಿಕ್ಸ್
ಸಿನಿಮಾದಲ್ಲಿ ಸಂಯುಕ್ತ ಹೆಗ್ಡೆ ಅಲ್ಲದೇ ಅರುಣ್ ಸಾಗರ್, ಅಚ್ಯುತ್ ಕುಮಾರ್, ರೋಷನ್ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ನಿರ್ಮಾಪಕ ದೇವೇಂದ್ರ ಅವರು ಅಗ್ನಿ ಶ್ರೀಧರ್ ಜೊತೆ ಅಂಡರ್ ವರ್ಲ್ಡ್ ಸಿನಿಮಾ ಮಾಡಬೇಕೆಂದುಕೊಂಡು ಬಂದ ನಿರ್ಮಾಪಕ. ಸಮಾಜದಲ್ಲಿ ನಡೆಯುತ್ತಿರುವ ಹತ್ಯೆ ಸಂಬಂಧ ಸಿನಿಮಾ ಮಾಡಿರೋ ಬಗ್ಗೆ ಖುಷಿ ಇದೆ ಎಂದು ತಿಳಿಸಿದರು. ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರೋ ಕ್ರೀಂ ಸಿನಿಮಾವನ್ನು ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.