'ಲವ್ ಮಾಕ್ಟೇಲ್' ಖ್ಯಾತಿಯ ನಟ ಡಾರ್ಲಿಂಗ್ ಕೃಷ್ಣ ಮತ್ತು ಮೊಗ್ಗಿನ ಮನಸು, ಬಚ್ಚನ್, ಮುಂಗಾರು ಮಳೆ 2 ಮುಂತಾದ ಹಿಟ್ ಚಿತ್ರಗಳನ್ನು ನೀಡಿರುವ ಸ್ಯಾಂಡಲ್ವುಡ್ ಸ್ವ-ಮೇಕ್ ನಿರ್ದೇಶಕ ಶಶಾಂಕ್ ಕಾಂಬೋದಲ್ಲಿ 'ಕೌಸಲ್ಯಾ ಸುಪ್ರಜಾ ರಾಮ' ಸಿನಿಮಾ ಬರುತ್ತಿರುವುದು ಗೊತ್ತೇ ಇದೆ. ಈಗಾಗಲೇ ಬಿಡುಗಡೆಗೂ ಮುಹೂರ್ತ ಫಿಕ್ಸ್ ಆಗಿದ್ದು, ಸಿನಿಮಾವು ಜುಲೈ 28ರಂದು ತೆರೆ ಕಾಣಲಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಕೂಡ ರಿಲೀಸ್ ಆಗಿದ್ದು, ಸಿನಿಪ್ರೇಮಿಗಳನ್ನು ಆಕರ್ಷಿಸಿದೆ.
ಇದೀಗ ಚಿತ್ರದ ಹಾಡೊಂದನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. '90 ಹಾಡು' ರಿಲೀಸ್ ಆಗಿದ್ದು, ಮಿಲನಾ ನಾಗರಾಜ್ ಸ್ಟೆಪ್ ಹಾಕಿದ್ದಾರೆ. 90 ಹಾಕು ಕಿಟ್ಟಪ್ಪ ಅಂತ ಹೇಳ್ತಾ ನಿಧಿಮಾ ಎಲ್ಲರನ್ನೂ ಕುಣಿಸಿದ್ದಾರೆ. "Weekend ಬಂತಲ್ಲ.. ನಮ್ ಕಿಟ್ಟಪ್ಪಾನೂ ಎಣ್ಣೆ ತಗೊಂಡು, ಹುಡ್ಗೀರ್ ಜೊತೆ ಬಂದೇಬಿಟ್ಟ!" ಎಂಬ ಕ್ಯಾಪ್ಶನ್ ಜೊತೆ ಚಿತ್ರತಂಡ ಹಾಡಿನ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಹಾಡು ಸಖತ್ ಟ್ರೆಂಡಿಂಗ್ ಆಗಿದೆ. 90 ಹಾಡಿಗೆ ಶಶಾಂಕ್ ಸಾಹಿತ್ಯ ಮತ್ತು ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿದೆ. ಈ ಐಟಂ ಸಾಂಗ್ ಐಶ್ವರ್ಯಾ ರಂಗರಾಜನ್ ಕಂಠದಲ್ಲಿ ಮೂಡಿಬಂದಿದೆ.
ಟ್ರೇಲರ್ ಹೇಗಿದೆ?:ಕೌಸಲ್ಯಾ ಸುಪ್ರಜಾ ರಾಮ ಒಂದು ರೀತಿಯಲ್ಲಿ ಎಲ್ಲರ ಮನೆಯ ಕಥೆಯಂತಿದೆ. ಟ್ರೇಲರ್ ನೋಡಿದವರಿಗೆ ಇದು ಪುರುಷ ಪ್ರಧಾನ ಸಮಾಜದ ಕಥೆ ಎನಿಸುತ್ತದೆ. ಆದರೆ ಪುರುಷ ಪ್ರಧಾನ ಸಮಾಜದ ಪ್ರತೀಕದಂತಿರುವ ನಾಯಕ ನಟ ನಂತರದಲ್ಲಿ ಏನಾಗುತ್ತಾನೆ? ಅನ್ನೋದೇ ಕಥಾಹಂದರ. ಪುರುಷರ ಅಹಂ ಎಂಬುದು ಸಮಾಜವನ್ನು ಎಷ್ಟು ಆವರಿಸಿಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಈ ಸಿನಿಮಾ ಹೇಳುತ್ತದೆ. ಇದು ತಾಯಿ ಮತ್ತು ಮಗನ ಬಾಂಧವ್ಯದ ಕಥೆಯ ಜೊತೆಗೆ ವಿಭಿನ್ನವಾಗಿದೆ.