ಭಾರತೀಯ ಚಿತ್ರಗಳು, ಗೀತೆಗಳು ಜಗತ್ತಿನಾದ್ಯಂತ ಸದ್ದು ಮಾಡುತ್ತಿವೆ. ಸೌತ್ ಸೂಪರ್ ಹಿಟ್ ಸಿನಿಮಾ 'RRR'ನ ನಾಟು ನಾಟು ಹಾಡು ಈಗಲೂ ಜನರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿದೆ. ನಾಟು ನಾಟು ಹಾಡಿನ ಕ್ರೇಜ್ ಕಿಂಚಿತ್ತೂ ಕಡಿಮೆ ಆಗಿಲ್ಲ.
ಚಿತ್ರ ಬಿಡುಗಡೆಯಾದ ಮೊದಲ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ಪಡೆಯುತ್ತಾ ಬಂದಿದೆ. ಈ ಚಿತ್ರ ಗಳಿಸಿದ ಸಾವಿರಾರು ಕೊಟಿ ರೂಪಾಯಿ ಕಲೆಕ್ಷನ್ ಒಂದೆಡೆಯಾದರೆ, ಪ್ರಶಸ್ತಿಗಳ ಸಂಗ್ರಹ ಮತ್ತೊಂದೆಡೆ. ಆರ್ಆರ್ಆರ್ ತನ್ನ ಪ್ರಶಸ್ತಿ ಪಟ್ಟಿಯ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಿದೆ. ಜೊತೆಗೆ ಎಲ್ಲರ ಬಾಯಿ, ಕಿವಿಯಲ್ಲಿ ನಾಟು ನಾಟು ಗೀತೆ ಕೇಳಿಬರುತ್ತಿದೆ.
ಭಾರತದಲ್ಲಿರುವ ದಕ್ಷಿಣ ಕೊರಿಯಾ ರಾಯಭಾರಿ ಕಚೇರಿ ನೌಕರರು ಈ ಹಾಡಿಗೆ ಬಹಳ ಉತ್ಸುಕರಾಗಿ ಕುಣಿದಿದ್ದಾರೆ. ಭಾರತೀಯ ಸಿಬ್ಬಂದಿಯೂ ಇವರಿಗೆ ಸಾಥ್ ನೀಡಿದ್ದಾರೆ. ಈ ವಿಡಿಯೋವನ್ನು ಕೊರಿಯಾ ರಾಯಭಾರಿ ಕಚೇರಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಡ್ಯಾನ್ಸ್ ವಿಡಿಯೋ ಬಹಳ ಚೆನ್ನಾಗಿದೆ, ತಂಡದ ಪ್ರಯತ್ನ ಕೂಡ ಉತ್ತಮವಾಗಿದೆ ಎಂದು ಪಿಎಂ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕೊರಿಯನ್ ರಾಯಭಾರಿ ಚಾಂಗ್ ಜೇ ಬೋಕ್ ಮತ್ತು ಇತರೆ ಸಿಬ್ಬಂದಿ ಡ್ಯಾನ್ಸ್ ಮಾಡಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ನೆಟಿಜನ್ಗಳು ಈ ವಿಡಿಯೋಗೆ ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಪಾಕಿಸ್ತಾನದ ವಿಡಿಯೋವೊಂದು ಸಖತ್ ಸದ್ದು ಮಾಡಿತ್ತು. ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಅವರು 'ನಾಟು ನಾಟು' ಹಾಡಿಗೆ ನೃತ್ಯ ಮಾಡಿದ್ದರು. ಹನಿಯಾ ಅಮೀರ್ ಅವರು ಪಾಕಿಸ್ತಾನದ ಜನಪ್ರಿಯ ನಟಿ. ಮದುವೆ ಕಾರ್ಯಕ್ರಮ ಒಂದರಲ್ಲಿ 'ನಾಟು ನಾಟು' ಹಾಡಿನ ಹಿಂದಿ ಆವೃತ್ತಿಗೆ ನೃತ್ಯ ಮಾಡಿದ್ದರು. ನಟ ಸಬೂರ್ ಅಲಿ, ಹನಿಯಾ ಅಮೀರ್‌ಗೆ ಸಾಥ್ ನೀಡಿದ್ದಾರೆ. ಈ ಡ್ಯಾನ್ಸ್ ವಿಡಿಯೋವನ್ನು ಸಬೂರ್, ಹನಿಯಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಡ್ಯಾನ್ಸ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದನ್ನೂ ಓದಿ:ಹಾಲಿವುಡ್ ಕ್ರಿಟಿಕ್ಸ್ ಅಸೋಸಿಯೇಶನ್ ಫಿಲ್ಮ್ ಅವಾರ್ಡ್: 'ಆರ್ಆರ್ಆರ್' ಮುಡಿಗೇರಿದ 4 ಅತ್ಯುನ್ನತ ಪ್ರಶಸ್ತಿಗಳು
ದಿ. ಲತಾ ಮಂಗೇಶ್ಕರ್ ಅವರ 'ಮೇರಾ ದಿಲ್ ಯೇ ಪುಕಾರೆ ಆಜಾ' ಹಾಡಿಗೆ ಪಾಕಿಸ್ತಾನದ ಮಹಿಳಾ ಯೂಟ್ಯೂಬರ್ ನೃತ್ಯ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು.
ಇದನ್ನೂ ಓದಿ:ಪಾಕಿಸ್ತಾನದಲ್ಲೂ RRR ಕ್ರೇಜ್: ನಾಟು ನಾಟು ಹಾಡಿಗೆ ನಟಿಯಿಂದ ಭರ್ಜರಿ ಸ್ಟೆಪ್ಸ್- ನೋಡಿ
'ಆರ್ಆರ್ಆರ್' ತಂಡವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳುತ್ತಿದೆ. ಸೌತ್ ಸೂಪರ್ ಸ್ಟಾರ್ ರಾಮ್ ಚರಣ್ ಪ್ರಸ್ತುತ ನಿರ್ದೇಶಕ ರಾಜಮೌಳಿ ಅವರೊಂದಿಗೆ ಯುಎಸ್ ಪ್ರವಾಸ ಕೈಗೊಂಡಿದ್ದಾರೆ. ಕಳೆದ ಐದು ದಿನಗಳಿಂದ, ಯುಎಸ್ನ ಅನೇಕ ಮಾಧ್ಯಮಗಳು ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿದ್ದಾರೆ. ಆರ್ಆರ್ಆರ್ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.. ಇನ್ನೂ ಮಾರ್ಚ್ 12ರಂದು ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯಲಿದ್ದು, ಈ ಪ್ರಶಸ್ತಿಗೂ ನಾಟು ನಾಟು ಹಾಡು ನಾಮನಿರ್ದೇಶನಗೊಂಡಿದೆ. ಸದ್ಯ ಎಲ್ಲರ ದೃಷ್ಟಿ ಆಸ್ಕರ್ ಮೇಲೆ ನೆಟ್ಟಿದೆ.