ಕನ್ನಡ ಚಿತ್ರರಂಗದಲ್ಲಿ ಕಾಮಿಡಿ ಮಾಡುತ್ತ ಬೆಳ್ಳಿ ತೆರೆ ಮೇಲೆ ಹೀರೋ ಆಗಿ ಕನ್ನಡಿಗರ ಮನಗೆದ್ದ ನಟ ಕೋಮಲ್. ತಮ್ಮ ವಿಭಿನ್ನ ಮ್ಯಾನರಿಸಂ ನಿಂದಲೇ ಸೆನ್ಸೇಷನಲ್ ಸ್ಟಾರ್ ಆದವರು. ಸದ್ಯ ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡುತ್ತ ಬ್ಯುಸಿಯಾಗಿದ್ದಾರೆ. ಇದೀಗ ಅವರ ಹಳೆಯ ಹಿಟ್ ಸಿನಿಮಾದ ಪಾರ್ಟ್ 2 ಮಾಡಲು ಕೋಮಲ್ ಮುಂದಾಗಿದ್ದಾರೆ.
'ನಮೋ ಭೂತಾತ್ಮ' ಸಿನಿಮಾ ಎಲ್ಲರಿಗೂ ಗೊತ್ತೇ ಇದೆ. 2014 ರಲ್ಲಿ ಈ ಚಿತ್ರ ಬಿಡುಗಡೆಯಾಗಿ ಪ್ರೇಕ್ಷಕರನ್ನು ಭಯ ಪಡಿಸುವುದರ ಜೊತೆ ನಗಿಸಿತ್ತು. ಇದೀಗ ಮತ್ತೆ ನಿಮ್ಮ ಎದೆ ಬಡಿತವನ್ನು ಜಾಸ್ತಿ ಮಾಡಲು 9 ವರ್ಷಗಳ ಬಳಿಕ ಇದೇ ಸಿನಿಮಾ ಪಾರ್ಟ್ 2 ಆಗಿ ಬರ್ತಿದೆ. ಇಂದು ಚಿತ್ರದ ಟೀಸರ್ ರಿಲೀಸ್ ಆಗಿದೆ. ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಟೀಸರ್ ರಿಲೀಸ್ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.
'ನಮೋ ಭೂತಾತ್ಮ 2' ಸಿನಿಮಾವನ್ನು ವಿ.ಮುರಳಿ ನಿರ್ದೇಶಿಸಿದ್ದಾರೆ. ಸಂತೋಷ್ ಶೇಖರ್ ನಿರ್ಮಾಣ ಮಾಡಿದ್ದಾರೆ. ಕೋಮಲ್ಗೆ ನಾಯಕಿಯಾಗಿ ಲೇಖಾ ಅಭಿನಯಿಸಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಜಿಜಿ ಹಾಗೂ ಮಿಮಿಕ್ರಿ ಗೋಪಿ, ಮೋನಿಕಾ, ವರುಣ್ ರಾಜ್, ಮಹಂತೇಶ್ ಹೀಗೆ ಅನೇಕ ಕಲಾವಿದರು ತಾರಾ ಬಳಗದಲ್ಲಿದ್ದಾರೆ. ಚಿತ್ರಕ್ಕೆ ಹಾಲೇಶ್ ಛಾಯಾಗ್ರಹಣವಿದೆ. 2024 ರಲ್ಲಿ ಸಿನಿಮಾ ಬಿಡುಗಡೆಗೆ ಪ್ಲಾನ್ ಮಾಡಲಾಗಿದೆ.
ಇದನ್ನೂ ಓದಿ:ಹೆಣಗಳ ರಾಶಿ ಮಧ್ಯೆ 'ಕ್ಯಾಪ್ಟನ್ ಮಿಲ್ಲರ್': ಧನುಷ್-ಶಿವಣ್ಣ ಸಿನಿಮಾ ಬಗ್ಗೆ ಅಭಿಮಾನಿಗಳಲ್ಲಿ ಗರಿಗೆದರಿದ ನಿರೀಕ್ಷೆ
ಇಂಡಸ್ಟ್ರಿಗೆ ಕೋಮಲ್ ಕಮ್ ಬ್ಯಾಕ್:ಕೆಂಪೇಗೌಡ ಸಿನಿಮಾ ನಂತರ ಸಂಪೂರ್ಣವಾಗಿ ಚಿತ್ರರಂಗದಿಂದ ದೂರ ಉಳಿದಿದ್ದ ನಟ ಕೋಮಲ್ ‘ಕಾಲಾಯ ನಮಃ’ ಚಿತ್ರದ ಮೂಲಕ ಕೆಲ ತಿಂಗಳ ಹಿಂದೆ ಸ್ಯಾಂಡಲ್ವುಡ್ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದರು. ಕಾಲಾಯ ನಮಃ ಚಿತ್ರ ಬಿಡುಗಡೆಗೂ ಮುನ್ನ ನಟ ಕೋಮಲ್ ರೋಲೆಕ್ಸ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಈಗ ‘ಯಲಾ ಕುನ್ನಿ’ ಚಿತ್ರದಲ್ಲಿ ನಟಿಸಲು ತಯಾರಾಗುತ್ತಿದ್ದಾರೆ. ಅದರೊಂದಿಗೆ ಇತ್ತೀಚೆಗೆ ಉಂಡೆನಾಮ ಸಿನಿಮಾ ಬಿಡುಗಡೆಯಾಗಿ ತಕ್ಕಮಟ್ಟಿಗೆ ಹಿಟ್ ಆಗಿತ್ತು.
'ಉಂಡೆನಾಮ' ಹಾಕಿದ ಕೋಮಲ್: ಕೋಮಲ್ ಅಭಿನಯದ 'ಉಂಡೆನಾಮ' ಸಿನಿಮಾ ಏಪ್ರಿಲ್ 14 ರಂದು ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಕೋಮಲ್ ಕುಮಾರ್ಗೆ ಜೋಡಿಯಾಗಿ ನಟಿ ಧನ್ಯ ಬಾಲಕೃಷ್ಣ ನಟಿಸಿದ್ದರು. ಜೊತೆಗೆ ಹರೀಶ್ ರಾಜ್, ತಬಲನಾಣಿ, ಅಪೂರ್ವ, ವೈಷ್ಣವಿ, ತನಿಷ ಕುಪ್ಪಂಡ, ಬ್ಯಾಕ್ ಜನಾರ್ದನ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಚಿತ್ರದಲ್ಲಿದ್ದರು.
ನಿರ್ಮಾಪಕರಾದ ಟಿ ಆರ್ ಚಂದ್ರಶೇಖರ್ ಹಾಗೂ ಸಿ ನಂದಕಿಶೋರ್ ಸಿನಿಮಾವನ್ನು ಎನ್ ಕೆ ಸ್ಟುಡಿಯೋಸ್ನ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಮಜಾ ಟಾಕೀಸ್, ರಾಬರ್ಟ್ ಸಿನಿಮಾ ಖ್ಯಾತಿಯ ಕೆ ಎಲ್ ರಾಜಶೇಖರ್ ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ಶ್ರೀಧರ್ ವಿ ಸಂಭ್ರಮ್ ಸಂಗೀತ, ನವೀನ್ ಕುಮಾರ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ.
ಇದನ್ನೂ ಓದಿ:ಗೋಲ್ಡನ್ ಸ್ಟಾರ್ ಗಣೇಶ್ ಬರ್ತ್ ಡೇಗೆ ಸ್ಪೆಷಲ್ ಗಿಫ್ಟ್: ಕೃಷ್ಣಂ ಪ್ರಣಯ ಸಖಿ ಫಸ್ಟ್ ಲುಕ್ ಅನಾವರಣ