ಕನ್ನಡ ಚಿತ್ರರಂಗದ ಜನಪ್ರಿಯ ಸೆಲೆಬ್ರಿಟಿ ಸಹೋದರರು ಎಂದರೆ ಅದು ನವರಸನಾಯಕ ಜಗ್ಗೇಶ್ ಹಾಗೂ ಕೋಮಲ್ ಕುಮಾರ್. ಹಿರಿಯ ಮತ್ತು ಜನಪ್ರಿಯ ನಟ ಜಗ್ಗೇಶ್ ಚಿತ್ರರಂಗಕ್ಕೆ ಬಂದ ದಿನದಿಂದಲೂ ಅವರ ಚಿತ್ರಗಳಲ್ಲಿ ಸಹೋದರ ಕೋಮಲ್ ಅವರಿಗೆ ಒಂದು ಪಾತ್ರ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಕೋಮಲ್ ಕುಮಾರ್ ಸಿನಿ ಬೆಳವಣಿಗೆಯಲ್ಲಿ ಜಗ್ಗೇಶ್ ಪಾಲು ಹೆಚ್ಚಿದೆ. ಇತ್ತ ಪ್ರೇಕ್ಷಕರನ್ನು ರಂಜಿಸುವಲ್ಲಿ ಕೋಮಲ್ ಸಹ ಯಶ ಕಂಡಿದ್ದಾರೆ.
ಸಹೋದರರ ಸ್ಕ್ರೀನ್ ಶೇರ್:ಇದೀಗ ಅನಸೂಯ ಕೋಮಲ್ ಕುಮಾರ್ ನಿರ್ಮಾಣದ, ಮತಿವಣನ್ ನಿರ್ದೇಶನದ "ಕಾಲಾಯ ನಮಃ" ಚಿತ್ರದಲ್ಲಿ ಜಗ್ಗೇಶ್ ಮತ್ತು ಕೋಮಲ್ ಅಭಿನಯಿಸುತ್ತಿದ್ದಾರೆ. ಬಹಳ ದಿನಗಳ ನಂತರ ಸಹೋದರರು ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಕೆಲ ಸಮಯ ಸಿನಿಮಾಗಳಿಂದ ದೂರವಿದ್ದ ಕೋಮಲ್ ಈ ಕಾಲಾಯ ನಮಃ ಸಿನಿಮಾ ಮೂಲಕ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತಮ್ಮ ಮುಖ್ಯಭೂಮಿಕೆಯಲ್ಲಿರುವ ಸಿನಿಮಾದಲ್ಲಿ ಅಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.
ಸಹೋದರರ ಸಾಂಗ್ ಶೂಟಿಂಗ್:ಇವರಿಬ್ಬರೂ ಭಾಗವಹಿಸಿರುವ ಹಾಡೊಂದರ ಶೂಟಿಂಗ್ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ಸಂದರ್ಭದಲ್ಲಿ ಇಡೀ ಕಾಲಾಯ ನಮಃ ಚಿತ್ರತಂಡ ಉಪಸ್ಥಿತವಿತ್ತು. ಸಹೋದರರನ್ನು ಒಂದೇ ಪರದೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ರೆಡಿಯಾಗಿದ್ದಾರೆ.
'ಕೋಮಲ್ ಅದ್ಭುತ ಕಲಾವಿದ'..ಈ ಬಗ್ಗೆ ಮೊದಲಿಗೆ ಮಾತು ಆರಂಭಿಸಿದ ನಟ ಜಗ್ಗೇಶ್, ''ನಾನು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದೇನೆ. ಕೋಮಲ್ ಅವರು ಉತ್ತಮ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ಕೋಮಲ್ ಅದ್ಭುತ ಕಲಾವಿದ ಎಂದು ನಾನು, ಈ ಹಿಂದಿನಿಂದಲೂ ಹೇಳುತ್ತಾ ಬರುತ್ತಿದ್ದೇನೆ. ಈ ಸಿನಿಮಾದಲ್ಲಿ ನಾನು, ಕೋಮಲ್ ಹಾಗೂ ನನ್ನ ಮಗ ಯತಿರಾಜ್ ಬಣ್ಣ ಹಚ್ಚಿದ್ದೇವೆ. ಇತ್ತೀಚೆಗೆ ಬರುತ್ತಿರುವ ಅನೇಕ ಸಿನಿಮಾಗಳು ಯಶಸ್ವಿ ಆಗುತ್ತಿವೆ. ಕಾಲಾಯ ನಮಃ ಸಹ ಪ್ರಚಂಡ ಯಶಸ್ಸು ಕಾಣಲಿ'' ಎಂದು ಶುಭ ಹಾರೈಸಿದರು.