ಕಾಲಿವುಡ್ ಮೋಸ್ಟ್ ಹ್ಯಾಂಡ್ಸಮ್ ಬ್ಯಾಚುಲರ್ ನಟ ವಿಶಾಲ್ ಮದುವೆಯ ಬಗ್ಗೆ ಕೆಲವು ವದಂತಿಗಳು ಇತ್ತೀಚೆಗೆ ಕೇಳಿ ಬರುತ್ತಿದೆ. ತಮಿಳು ಸ್ಟಾರ್ ನಟಿ ಲಕ್ಷ್ಮಿ ಮೆನನ್ ಜೊತೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದೆ. ಈ ವಿಚಾರವಾಗಿ ಇದೀಗ ವಿಶಾಲ್ ಪ್ರತಿಕ್ರಿಯಿಸಿದ್ದಾರೆ. ಇಲ್ಲ ಸಲ್ಲದ ವದಂತಿಗಳು ಲಕ್ಷ್ಮಿ ಮೆನನ್ ಮೇಲೆ ಹೆಚ್ಚು ಪರಿಣಾಮ ಬೀರುವ ಕಾರಣಕ್ಕಾಗಿ ಈ ವಿಚಾರವಾಗಿ ಮಾತನಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ವದಂತಿ ಬಗ್ಗೆ ವಿಶಾಲ್ ಕ್ಲಾರಿಟಿ: ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ಕುರಿತಾದ ವದಂತಿಗೆ ಸೋಷಿಯಲ್ ಮೀಡಿಯಾದ ಮೂಲಕ ವಿಶಾಲ್ ಸ್ಪಷ್ಟನೆ ನೀಡಿದ್ದಾರೆ. "ಸಾಮಾನ್ಯವಾಗಿ ನಾನು ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಇನ್ನಿತರ ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಇದೀಗ ಲಕ್ಷ್ಮಿ ಮೆನನ್ ಜೊತೆಗೆ ನನ್ನ ಮದುವೆಯ ಬಗ್ಗೆ ವದಂತಿಗಳಿವೆ. ಈ ವಿಚಾರವನ್ನು ಸಲೀಸಾಗಿ ಅಲ್ಲಗಳೆಯುತ್ತೇನೆ ಮತ್ತು ಇದು ಸತ್ಯಕ್ಕೂ ದೂರವಾದ ಸುದ್ದಿ" ಎಂದು ಹೇಳಿದ್ದಾರೆ.
ಅಲ್ಲದೇ, ಲಕ್ಷ್ಮಿ ಮೆನನ್ ಜೊತೆಗಿನ ಮದುವೆ ವದಂತಿ ಬಗ್ಗೆ ಮೌನ ಮುರಿದ ಕಾರಣವನ್ನು ನಟ ಬಹಿರಂಗಪಡಿಸಿದ್ದಾರೆ. ಆಕೆ ಒಬ್ಬಳು ಹುಡುಗಿಯಾಗಿ ಅವಳ ಮೇಲೆ ಕೆಟ್ಟ ಇಮೇಜ್ ಸೃಷ್ಟಿಯಾಗುವುದು ಇಷ್ಟವಿಲ್ಲ ಎಂಬ ಕಾರಣಕ್ಕೆ ಈ ವಿಚಾರವಾಗಿ ಮಾತನಾಡುತ್ತಿರುವುದಾಗಿ ಅವರು ಹೇಳಿದ್ದಾರೆ. "ಅವರೊಬ್ಬ ನಟಿ ಎನ್ನುವುದಕ್ಕಿಂತ ಹೆಚ್ಚಾಗಿ ಹುಡುಗಿ ಎಂಬ ಕಾರಣಕ್ಕೆ ಪ್ರತಿಕ್ರಿಯಿಸುತ್ತಿದ್ದೇನೆ. ಒಬ್ಬಳು ಹುಡುಗಿಯ ವೈಯಕ್ತಿಕ ಜೀವನದ ಬಗ್ಗೆ ಹೀಗೆಲ್ಲಾ ವದಂತಿ ಸೃಷ್ಟಿಸುತ್ತಾ ಅವರ ಖಾಸಗಿತನವನ್ನು ಆಕ್ರಮಿಸಿಕೊಳ್ಳುತ್ತಿದ್ದೀರಿ. ಇದು ನಟಿಯ ಇಮೇಜ್ ಅನ್ನು ಹಾಳು ಮಾಡುತ್ತಿದೆ" ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:Vijay Deverakonda: ಕೊನೆಗೂ ಮದುವೆ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ - ವಧು ಯಾರು?