ಬಾಲಿವುಡ್ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್'ನ ಎಂಟನೇ ಸೀಸನ್ನಲ್ಲಿ ಈಗಾಗಲೇ ಸ್ಟಾರ್ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಯಾರು ಭಾಗಿಯಾಗುತ್ತಾರೆ? ಫೈನಲ್ ಎಪಿಸೋಡ್ಗೆ ಯಾರಿರಲಿದ್ದಾರೆ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಸೂಪರ್ ಸ್ಟಾರ್ ಸಲ್ಮಾನ್ ಖಾನ್, ಕಿಂಗ್ ಖಾನ್ ಶಾರುಖ್ ಆಗಮನವನ್ನು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ.
ಕಾಫಿ ವಿತ್ ಕರಣ್ ಸೀಸನ್ 8 ದೀಪ್ವೀರ್ ಜೋಡಿಯೊಂದಿಗೆ ಆರಂಭವಾಯಿತು. ದೀಪಿಕಾ ಪಡುಕೋಣೆ, ರಣ್ವೀರ್ ಸಿಂಗ್ ಬಳಿಕ ಸನ್ನಿ ಡಿಯೋಲ್, ಬಾಬಿ ಡಿಯೋಲ್, ಸಾರಾ ಅಲಿ ಖಾನ್, ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್, ಆಲಿಯಾ ಭಟ್ ಅವರಂತಹ ಸ್ಟಾರ್ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. ಮುಂಬರುವ ಅತಿಥಿಗಳ ಬಗ್ಗೆ ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್‌ಗೆ ಸಂಪರ್ಕ ಹೊಂದಿರುವ ಇಬ್ಬರು ತಾರೆಯರು ತಮ್ಮ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಕರಣ್ ಸುಳಿವು ನೀಡಿದ್ದಾರೆ.
ಇಂದು ಇನ್ಸ್ಟಾಗ್ರಾಮ್ ಲೈವ್ ಸೆಷನ್‌ನಲ್ಲಿ ನಿರೂಪಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಚಾಟ್ ಶೋನ ಮುಂದಿನ ಅತಿಥಿಗಳ ಬಗ್ಗೆ ಸುಳಿವು ನೀಡಿದರು. ಬರುವ ಗುರುವಾರ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ನಟ ವಿಕ್ಕಿ ಕೌಶಲ್ ಆಗಮಿಸೋದು ಬಹುತೇಕ ಖಚಿತವಾಗಿದೆ. ಉಳಿದಂತೆ ಮುಂಬರುವ ಸಂಚಿಕೆಗಳ ಅತಿಥಿಗಳ ಬಗ್ಗೆ ಸುಳಿವು ನೀಡಿದ ಕರಣ್, ಆಲಿಯಾ ಭಟ್ ಅವರ ವೃತ್ತಿಜೀವನದ ಪ್ರಾರಂಭವಾದಾಗ ಒಡನಾಟ ಹೊಂದಿದ್ದವರು ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ತಿಳಿಸಿದರು. 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್ನಲ್ಲಿ ಆಲಿಯಾ ಭಟ್ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದು, ಈ ಇಬ್ಬರು ಬರುವ ಸುಳಿವನ್ನು ಕರಣ್ ಬಿಟ್ಟುಕೊಟ್ಟಿದ್ದಾರೆ.
ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಭಾಗಿಯಾಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಮುಂದಿನ ಅತಿಥಿಗಳ ಬಗೆಗಿನ ಗೆಸ್ಸಿಂಗ್ ಗೇಮ್ಗೆ ನಿರೂಪಕ ಮತ್ತಷ್ಟು ಉತ್ಸಾಹ ತುಂಬಿದ್ದಾರೆ. ಮತ್ತೊಂದೆಡೆ ಕಿಯಾರಾ, ವಿಕ್ಕಿ ಕೌಶಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗಿದೆ. ಕಿಯಾರಾ ಅಡ್ವಾಣಿ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿಕ್ಕಿ ಕೌಶಲ್ ಬರಬಹುದು. ಸ್ಯಾಮ್ ಬಹದ್ದೂರ್ ಸಿನಿಮಾಗೆ ಸಜ್ಜಾಗುತ್ತಿರುವ ವಿಕ್ಕಿ ಕೌಶಲ್ ಆಗಮಿಸೋದು ಬಹುತೇಕ ಪಕ್ಕಾ ಆಗಿದೆ.