ಮಂಗಳೂರು :ವಿಚಿತ್ರ ಹೆಸರಿನೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಹೊಸ ಸಿನಿಮಾವೊಂದು ಬರುತ್ತಿದೆ. ಕ್ಲಾಂತ ಎಂಬ ಹೆಸರಿನ ಕನ್ನಡ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡು ಬಿಡುಗಡೆಗೆ ಸಿದ್ಧವಾಗಿದೆ. ಕರಾವಳಿಯ ಜನರ ಬಹು ನಂಬುಗೆಯ ದೈವ ಕೊರಗಜ್ಜನ ಪವಾಡದೊಂದಿಗೆ ಈ ಸಿನಿಮಾದ ಚಿತ್ರೀಕರಣ ಮುಗಿದಿದೆ. ಇದೇ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ಗೆ ತುಳು ಸಿನಿಮಾದ ನಾಯಕ ನಟ ವಿಘ್ನೇಶ್ ಪಾದಾರ್ಪಣೆ ಮಾಡುತ್ತಿದ್ದಾರೆ.
ಕ್ಲಾಂತ ಎಂಬ ಸಂಸ್ಕೃತ ಪದವನ್ನು ಬಳಸಿಕೊಂಡು ಕನ್ನಡ ಸಿನಿಮಾವೊಂದು ಶೀಘ್ರದಲ್ಲೇ ತೆರೆ ಮೇಲೆ ಬರಲಿದೆ. ಕ್ಲಾಂತ ಎಂದರೆ ಆಯಾಸ ಅಥವಾ ಇಲ್ಲಿಗೆ ಸಾಕು ಎಂಬ ಅರ್ಥವನ್ನು ನೀಡುತ್ತದೆ. ಈ ಸಿನಿಮಾವನ್ನು ಅನುಗ್ರಹ ಪವರ್ ಮೀಡಿಯಾ ಎಂಬ ಸಂಸ್ಥೆಯಡಿ ಸುಬ್ರಹ್ಮಣ್ಯ ಪಂಜದ ಉದಯ ಅಮ್ಮಣ್ಣಾಯ ಎಂಬವರು ನಿರ್ಮಾಣ ಮಾಡಿದ್ದಾರೆ. ತುಳುವಿನಲ್ಲಿ ದಗಲ್ ಬಾಜಿಲು ಮತ್ತು ಕನ್ನಡದಲ್ಲಿ ರಂಗನ್ ಸ್ಟೈಲ್ ಸಿನಿಮಾ ನಿರ್ದೇಶನ ಮಾಡಿದ ವೈಭವ್ ಪ್ರಶಾಂತ್ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾಗ ಎದುರಾದ ಸಂಕಷ್ಟಗಳನ್ನು ಕೊರಗಜ್ಜ ದೈವ ತನ್ನ ಪವಾಡದ ಮೂಲಕ ಪರಿಹರಿಸಿದೆ ಎನ್ನುವುದು ನಿರ್ದೇಶಕರ ಮಾತು. ಈ ಬಗ್ಗೆ ಈಟಿವಿ ಭಾರತ ಜೊತೆಗೆ ಮಾತನಾಡಿದ ಚಿತ್ರದ ನಿರ್ದೇಶಕ ವೈಭವ್ ಪ್ರಶಾಂತ್, ಈ ಸಿನಿಮಾವನ್ನು ಕೊರಗಜ್ಜನನ್ನು ನೆನೆಸಿಕೊಂಡು ನಿರ್ದೇಶನ ಮಾಡಿದ್ದೇನೆ. ಈ ಸಿನಿಮಾಗೆ ಮೊದಲು ಬಂಡವಾಳ ಹೂಡಲು ಬಂದಿದ್ದ ನಿರ್ಮಾಪಕರೊಬ್ಬರು ಹಿಂದೆ ಸರಿದಿದ್ದರು. ಈ ಸಂದರ್ಭದಲ್ಲಿ ಕೊರಗಜ್ಜನನ್ನು ನೆನೆದಾಗ ಉದಯ ಅಮ್ಮಾಣ್ಣಾಯ ಸಿಕ್ಕಿದರು. ಈ ಸಿನಿಮಾಗೆ ನಾಯಕಿಯಾಗಿ ಸಂಗೀತಾ ಭಟ್ ಆಯ್ಕೆಯಾಗಿದ್ದರು. ಆದರೆ ಸಿನಿಮಾ ಚಿತ್ರೀಕರಣ ಆರಂಭಕ್ಕೆ ಒಂದು ವಾರದ ಮುಂಚೆ ಅವರಿಗೆ ಟೈಫಾಯ್ಡ್ ಜ್ವರ ಬಂದಿತ್ತು. ಅವರ ಬದಲಿಗೆ ಬೇರೆ ನಾಯಕಿಯನ್ನು ಹುಡುಕಿ ಮುಹೂರ್ತ ನೆರವೇರಿಸಿದ ದಿನವೇ ಅವರು ನಟಿಸಲು ನಿರಾಕರಿಸಿದ್ದರು. ಕೊರಗಜ್ಜನನ್ನು ನೆನೆದು ಮತ್ತೆ ಸಂಗೀತಾ ಭಟ್ ಅವರಿಗೆ ಫೋನ್ ಮಾಡಿದಾಗ ಅವರು ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡರು. ಈ ಸಿನಿಮಾದಲ್ಲಿ ಕೊರಗಜ್ಜ ದೈವದ ಬಗ್ಗೆ ಒಂದು ತುಳು ಹಾಡು ಕೂಡ ಇದೆ ಎಂದು ಹೇಳಿದರು.