ಕನ್ನಡ ಚಿತ್ರರಂಗದಿಂದ ಅತ್ಯುತ್ತಮ ಸಿನಿಮಾಗಳು ನಿರ್ಮಾಣ ಆಗುತ್ತಿವೆ. ಉತ್ತುಮ ಕಥಾಹಂದರ, ಅದ್ಧೂರಿ ಮೇಕಿಂಗ್, ಕಥೆ ಹೇಳುವ ಶೈಲಿ ಮಾತ್ರವಲ್ಲದೇ ಹೊಸ ಬಗೆಯ ಶೀರ್ಷಿಕೆಗಳು ಸಹ ಬಹಳಷ್ಟು ಸದ್ದು ಮಾಡುತ್ತಿವೆ. ಈ ಪಟ್ಟಿಗೀಗ 'ಕ್ಲಾಂತ' ಹೊಸ ಸೇರ್ಪಡೆ. ಈ ಹಿಂದೆ ರಂಗನ್ ಸ್ಟೈಲ್, ದಗಲು ಬಾಜಿಲು ಸೇರಿದಂತೆ ಕೆಲ ಸಿನಿಮಾಗಳನ್ನು ನಿರ್ದೇಶಿರುವ ವೈಭವ್ ಪ್ರಶಾಂತ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನೆರವೇರಿದೆ. ಸಿನಿಮಾ ಬಗ್ಗೆ ಚಿತ್ರತಂಡ ಕೆಲ ವಿಚಾರಗಳನ್ನು ಹಂಚಿಕೊಂಡಿದೆ.
ನಟಿ ಸಂಗೀತಾ ಭಟ್ ಮಾತನಾಡಿ, ನನಗೆ ಈ ಸಿನಿಮಾ ತುಂಬಾನೇ ವಿಶೇಷ. ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದೆ. ನಾನು ಕಂಬ್ಯಾಕ್ ಮಾಡಿದಾಗ ಸೈನ್ ಮಾಡಿದ ಮೊದಲ ಚಿತ್ರವಿದು. ಟೀನೇಜ್ ದಾಟಿ ಈಗ ತಾನೇ ಕೆಲಸ ಮಾಡುವ ಪಾತ್ರ ನನ್ನದು. ಹೆಚ್ಚಾಗಿ ಕಾಡಿನಲ್ಲಿ ಶೂಟ್ ಮಾಡಲಾಗಿದ್ದು, ಒಂದೊಳ್ಳೆ ಅನುಭವ. ಇಲ್ಲಿ ನನ್ನ ಪಾತ್ರಕ್ಕೆ ಬೇಕಾದ ಫಿಟ್ನೆಸ್, ಭಾವನೆಗಳನ್ನು ಬದಲಾಯಿಸಿದ್ದೇನೆ. ಫೈಟ್ ಸೀಕ್ವೆನ್ಸ್ ಮಾಡಿದ್ದು, ಖುಷಿ ಕೊಟ್ಟಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ನಾಯಕ ವಿಘ್ನೇಶ್ ಮಾತನಾಡಿ, ಈ ಚಿತ್ರದಲ್ಲಿ ನಟಿಸಿದ್ದು, ಬಹಳ ಖುಷಿ ಕೊಟ್ಟಿದೆ. ಕನ್ನಡದಲ್ಲಿ ಇದು ನನ್ನ ಮೊದಲ ಸಿನಿಮಾ. ತುಳುವಿನಲ್ಲಿ ಪ್ರಶಾಂತ್ ಸರ್ ಜೊತೆ ಸಿನಿಮಾ ಮಾಡಿದ್ದೇನೆ. ಆ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರಕ್ಕೂ ನಿಮ್ಮ ಬೆಂಬಲ ಇರಲಿ ಎಂದು ಕೇಳಿಕೊಂಡರು. ನಿರ್ದೇಶಕ ವೈಭವ್ ಪ್ರಶಾಂತ್ ಮಾತನಾಡಿ, ಇದು ನನ್ನ ನಾಲ್ಕನೇ ಸಿನಿಮಾ. ಯುವಜನತೆಗೆ ಒಳ್ಳೆ ಸಂದೇಶ ಕೊಡುವ ಚಿತ್ರವಿದು. ಅಪ್ಪ ಅಮ್ಮನಿಗೆ ಸುಳ್ಳು ಹೇಳಿ ತಪ್ಪು ದಾರಿ ಹಿಡಿಯದಿರಿ ಎಂಬ ಉದ್ದೇಶವನ್ನಿಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಶೂಟಿಂಗ್ ಕಂಪ್ಲೀಟ್ ಆಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಬಹುತೇಕ ಮುಗಿದಿದೆ ಎಂದು ತಿಳಿಸಿದರು.