ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಬಹುನಿರೀಕ್ಷಿತ ಸಿನಿಮಾ ಈದ್ ಸಂದರ್ಭ, ಏಪ್ರಿಲ್ 21ರಂದು ತೆರೆ ಕಂಡಿದೆ. ಬಹು ಸಮಯದ ನಂತರ ತೆರೆ ಮೇಲೆ ಬಂದ ಸಲ್ಮಾನ್ ಮತ್ತು ಚಿತ್ರತಂಡಕ್ಕೆ ಕಲೆಕ್ಷನ್ ವಿಚಾರದಲ್ಲಿ ನಿರಾಸೆಯಾಗಿದೆ. ಸಿನಿಮಾ ಗಳಿಕೆ ಇಳಿಕೆಯಾಗತೊಡಗಿದೆ.
ಬಹು ನಿರೀಕ್ಷೆಯೊಂದಿಗೆ ಸಿನಿಮಾ ಮಾಡಿದ ಬಾಲಿವುಡ್ ಬ್ಯಾಚುಲರ್ ಸಲ್ಮಾನ್ ಖಾನ್ಗೆ 2023ನೇ ಸಾಲು ಅದೃಷ್ಟ ತಂದುಕೊಟ್ಟಿಲ್ಲ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದೆ. ಅದ್ಧೂರಿ ವೆಚ್ಚದಲ್ಲಿ ತಯಾರಾದ ಭಾಯ್ಜಾನ್ನ ಸಿನಿಮಾ ಏಪ್ರಿಲ್ 21ರಂದು ಬಿಡುಗಡೆ ಆಯಿತು. ಸಲ್ಮಾನ್ ಸಿನಿಮಾ ತೆರೆಕಂಡು 15 ದಿನಗಳು ಕಳೆದಿದ್ದು, 16ನೇ ದಿನಕ್ಕೆ ಕಾಲಿಡುತ್ತಿದೆ. ಆದರೆ ಈ 15 ದಿನಗಳಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಸಂಖ್ಯೆ ಚಿತ್ರ ತಂಡಕ್ಕೆ ನಿರಾಸೆಯುಂಟುಮಾಡಿದೆ. ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ ಪಲಕ್ ತಿವಾರಿ ಮತ್ತು ಶೆಹನಾಜ್ ಗಿಲ್ ಕೂಡ ಜಾದೂ ಮಾಡುವಲ್ಲಿ ವಿಫಲರಾಗಿದ್ದಾರೆ.
ವರದಿಗಳ ಪ್ರಕಾರ, ಸದ್ಯ ಚಿತ್ರ ಒಂದು ದಿನಕ್ಕೆ 1 ಕೋಟಿ ರೂ. ಕೂಡ ಕಲೆಕ್ಷನ್ ಮಾಡುತ್ತಿಲ್ಲ. ಆರಂಭಿಕ ಗಳಿಕೆ ಒಂದು ಮಟ್ಟಕ್ಕೆ ಉತ್ತಮವಾಗಿತ್ತಾದರೂ, ಸದ್ಯ ಅಂಕಿ - ಅಂಶಗಳು ಇಳಿಕೆಯಾಗಿದೆ. ಚಿತ್ರವು ಈವರೆಗೆ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ 115 ಕೋಟಿ ರೂಪಾಯಿ ಸಂಗ್ರಹಿಸಿದೆ ಮತ್ತು ವಿಶ್ವಾದ್ಯಂತ 165 ಕೋಟಿ ರೂ. ಕಲೆಕ್ಷನ್ ಮಾಡಿದೆ.