'ಕಿರಿಕ್ ಪಾರ್ಟಿ'. ಇದು ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾಗಳಲ್ಲೊಂದು. ಒಂದೊಳ್ಳೆಯ ಕಥೆ ಇದ್ದರೆ ಪ್ರೇಕ್ಷಕ ಪ್ರಭುಗಳು ಜೈ ಅಂತಾರೆ ಅನ್ನೋದನ್ನು ಸಾಬೀತುಪಡಿಸಿದ ಸಿನಿಮಾವಿದು. ರೊಮ್ಯಾಂಟಿಕ್-ಕಾಮಿಡಿ ಸಿನಿಮಾ 2016ರ ಡಿಸೆಂಬರ್ 30ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇಂದಿಗೂ ಅನೇಕರ ಮೆಚ್ಚಿನ 'ಕಿರಿಕ್ ಪಾರ್ಟಿ' ತೆರೆಕಂಡು ಏಳು ವರ್ಷಗಳಾಗಿದ್ದು, ಇದೇ ಶೈಲಿಯ ಮತ್ತೊಂದು ಚಿತ್ರ 'ಬ್ಯಾಚುಲರ್ ಪಾರ್ಟಿ' ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.
'ಕಿರಿಕ್ ಪಾರ್ಟಿ': 'ಕಿರಿಕ್ ಪಾರ್ಟಿ' ಸಿನಿಮಾವನ್ನು ಕಾಂತಾರ ನಟ ರಿಷಬ್ ಶೆಟ್ಟಿ ನಿರ್ದೇಶಿಸಿದ್ದರು. 777ಚಾರ್ಲಿ ಖ್ಯಾತಿಯ ರಕ್ಷಿತ್ ಶೆಟ್ಟಿ ಮತ್ತು ನ್ಯಾಶನಲ್ ಕ್ರಶ್ ಜನಪ್ರಿಯತೆಯ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸಂಯುಕ್ತ ಹೆಗ್ಡೆ, ಪ್ರಮೋದ್ ಶೆಟ್ಟಿ, ಅಚ್ಯುತ್ ಕುಮಾರ್, ಅರವಿಂದ್ ಅಯ್ಯರ್, ಧನಂಜಯ್ ರಂಜನ್, ಚಂದನ್ ಆಚಾರ್ ಪ್ರಮುಖ ಪಾತ್ರ ಮಾಡಿದ್ದರು. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗ್ಡೆ ಅವರಿಗಿದು ಚೊಚ್ಚಲ ಚಿತ್ರವಾಗಿತ್ತು. ರಕ್ಷಿತ್ ಶೆಟ್ಟಿ ನಟನೆ ಮಾತ್ರವಲ್ಲದೇ ಕಥೆ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು. ಕರ್ಮ್ ಚಾವ್ಲಾ ಕ್ಯಾಮರಾ ವರ್ಕ್ ನಿಭಾಯಿಸಿದ್ದರೆ, ಸಚಿನ್ ಬಿ.ರವಿ ಎಡಿಟಿಂಗ್ ಮಾಡಿದ್ದರು. ಬಿ.ಅಜನೀಶ್ ಲೋಕನಾಥ್ ಅವರ ಸುಮಧುರ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿತ್ತು.
'ಬ್ಯಾಚುಲರ್ ಪಾರ್ಟಿ': ಕಾಲೇಜು ದಿನಗಳ ಕಥೆಯಾದ ಹಿನ್ನೆಲೆಯಲ್ಲಿ ಈ ಸಿನಿಮಾ ಯುವಕರನ್ನು ಹೆಚ್ಚು ಆಕರ್ಷಿಸಿತ್ತು. ಹಾಡುಗಳು ಬಹದಿನಗಳ ಕಾಲ ಸದ್ದು ಮಾಡಿದ್ದವು. ನಾಲ್ಕು ಕೋಟಿ ರೂ. ಬಜೆಟ್‌ನ ಈ ಸಿನಿಮಾ ಸರಿಸುಮಾರು 50 ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ಸು ಕಂಡಿತ್ತು. ಇದೀಗ ಇದೇ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಬ್ಯಾಚುಲರ್ ಪಾರ್ಟಿ 2024ರ ಜನವರಿ 16ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲವಿದೆ.