ಸಿಂಪಲ್ ಕಥೆ, ಡಬಲ್ ಮನರಂಜನೆ, ಮತ್ತೊಮ್ಮೆ ನೋಡಬೇಕೆನಿಸುವ ದೃಶ್ಯಗಳು, ಅದ್ಭುತ ಪಾತ್ರಗಳ ಪರಿಚಯ, ಸಹಜ ಅಭಿನಯ, ಕಾಮಿಡಿ ಡೈಲಾಗ್ಸ್, ಹೆವಿ ಎಂಟರ್ಟೈನ್ಮೆಂಟ್... ಇದಕ್ಕೆಲ್ಲಾ ಒಂದೇ ಹೆಸರು 'ಕಿರಿಕ್ ಪಾರ್ಟಿ'. ರಿಷಬ್ ಶೆಟ್ಟಿ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ನಟಿಸಿರುವ ಕನ್ನಡದ ಸೂಪರ್ ಹಿಟ್ ಸಿನಿಮಾ ತೆರೆ ಕಂಡು 7 ವರ್ಷಗಳೇ ಆಗಿವೆ. ಈ ಚಿತ್ರದ ಕಥೆ ಇಂದಿಗೂ ಎಲ್ಲರಿಗೂ ನೆನಪಿದೆ. ಮತ್ತೊಮ್ಮೆ ಇಂತಹದ್ದೊಂದು ಸಿನಿಮಾ ತೆರೆ ಮೇಲೆ ನೋಡಲು ಸಿನಿ ಪ್ರೇಮಿಗಳು ಕಾಯುತ್ತಿದ್ದಾರೆ ಎಂದರೆ ತಪ್ಪಾಗಲಾರದು.
ಹೌದು. 2016, ಡಿಸೆಂಬರ್ 30ರಂದು ಬಿಡುಗಡೆಯಾದ 'ಕಿರಿಕ್ ಪಾರ್ಟಿ' ಸಿನಿಮಾ ಕಾಲೇಜು ಲೈಫ್ ಸ್ಟೋರಿಯನ್ನು ಒಳಗೊಂಡಿತ್ತು. ಪಿಯುಸಿ ಮುಗಿಸಿ ಡಿಗ್ರಿ ಜೀವನಕ್ಕೆ ಕಾಲಿಡುವ ವಿದ್ಯಾರ್ಥಿಗಳ ಕಥೆ, ವ್ಯಥೆಯೇ ಈ ಚಿತ್ರದ ತಿರುಳು. ಪಾಠಕ್ಕಿಂತ ಹೆಚ್ಚಾಗಿ ತುಂಟಾಟಗಳು, ತಪ್ಪು ಮಾಡಿ ಪ್ರಿನ್ಸಿಪಾಲ್ ಕೈಗೆ ಸಿಕ್ಕಿ ಬೀಳುವುದು, ಕಾಲೇಜಲ್ಲೊಂದು ಲವ್ ಸ್ಟೋರಿ, ಹಾಸ್ಟೆಲ್ ಲೈಫ್.. ಹೀಗೆ ಎಲ್ಲಾ ವಿಚಾರಗಳನ್ನು ಒಂದೇ ಸಿನಿಮಾದಲ್ಲಿ ಅತ್ಯಂತ ಅದ್ಭುತವಾಗಿ ಮತ್ತು ಸಹಜವಾಗಿ ತೋರಿಸಲಾಗಿತ್ತು. ಈ ಸಿನಿಮಾವನ್ನು ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರು ಕೂಡ ನೋಡಿ ಸಖತ್ ಎಂಜಾಯ್ ಮಾಡಿದ್ರು.
ಸದ್ಯ ಈ ಸಿನಿಮಾ ಬಂದು 7 ವರ್ಷವೇ ಆಗಿದೆ. ಮತ್ತೊಮ್ಮೆ ಇಂತಹದ್ದೇ ಕಥೆಯನ್ನು ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಯಾಕೆ ಮಾಡುತ್ತಿಲ್ಲ? ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಇದಕ್ಕೆ ಉತ್ತರ ಎಂಬಂತೆ ರಕ್ಷಿತ್ ಶೆಟ್ಟಿ ನ್ಯೂ ಅಪ್ಡೇಟ್ ಜೊತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ. 'ಈ ಸಲ ಪಾರ್ಟಿ ಜೋರು' ಎಂಬ ಶೀರ್ಷಿಕೆಯಡಿ, 'ನಿಮ್ಮೆಲ್ಲರ ಬೇಡಿಕೆ ಕೇಳಿಸಿದೆ. ಈ ಬಾರಿ ಇನ್ನಷ್ಟು ಕ್ರೇಜಿ ಪಾರ್ಟಿ ಮಾಡಲಾಗುವುದು. ನಾಳೆ (ಡಿಸೆಂಬರ್ 13) ಬೆಳಗ್ಗೆ ಹತ್ತು ಗಂಟೆ ಆರು ನಿಮಿಷಕ್ಕೆ ಈ ಕುರಿತು ಹೊಸ ಅಪ್ಡೇಟ್ ಹೊರಬೀಳಲಿದೆ' ಎಂಬುದಾಗಿ ಅವರು ತಿಳಿಸಿದ್ದಾರೆ.