ಬಾಲಿವುಡ್ ಸಿನಿಮಾಗಳಲ್ಲಿ ತೋರಿಸಲಾಗುವ ಅತಿಯಾದ ಪ್ರಣಯ ದೃಶ್ಯಗಳಿಗೆ ನಿರ್ಮಾಪಕಿ ಹಾಗೂ ನಿರ್ದೇಶಕಿ ಕಿರಣ್ ರಾವ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದಕ್ಷಿಣ ಭಾರತದ ಸೂಪರ್ಹಿಟ್ ಸಿನಿಮಾ ಬಾಹುಬಲಿ ಮತ್ತು ಬಾಲಿವುಡ್ನ ಕಬೀರ್ ಸಿಂಗ್ ಸಿನಿಮಾವನ್ನು ತಾಳೆಹಾಕಿ ಉದಾಹರಿಸಿದ್ದಾರೆ. ಎಸ್ಎಸ್ ರಾಜಮೌಳಿ ಸಿನಿಮಾಗೆ ಮೆಚ್ಚುಗೆಯನ್ನು ಸೂಚಿಸಿ, ಹಿಂದಿ ಚಿತ್ರಗಳಲ್ಲಿ ಅತೀ ಆಳವಾದ ಪ್ರಣಯವನ್ನು ಎತ್ತಿ ತೋರಿಸುವ ಪ್ರವೃತ್ತಿ ವಿರುದ್ಧ ಕಿಡಿಕಾರಿದ್ದಾರೆ.
2019ರಲ್ಲಿ ಬಿಡುಗಡೆಯಾದ ಸಂದೀಪ್ ರೆಡ್ಡಿ ವಾಂಗಾ ನಿರ್ದೇಶನದ ಕಬೀರ್ ಸಿಂಗ್ ಸಿನಿಮಾವನ್ನು ಪ್ರಮುಖ ಉದಾಹರಣೆಯಾಗಿ ತೆಗೆದುಕೊಂಡ ಅವರು, ಇಂತಹ ಸಿನಿಮಾಗಳು ಸಮಾಜಕ್ಕೆ ನೀಡುವ ಸಂದೇಶದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಬಾಲಿವುಡ್ನ ಕೆಲವು ಚಿತ್ರಗಳು ರೊಮ್ಯಾಂಟಿಕ್ ದೃಶ್ಯಗಳನ್ನು ತೀರಾ ಆಳವಾಗಿ ತೋರಿಸುತ್ತದೆ ಎಂದು ಟೀಕಿಸಿದ್ದಾರೆ. ಮತ್ತೊಂದೆಡೆ, ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಸಿನಿಮಾವನ್ನು ಉಲ್ಲೇಖಿಸಿದ ಅವರು, ಇದರಲ್ಲಿ ಬರುವ ರೊಮ್ಯಾಂಟಿಕ್ ಸೀನ್ಗಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.
"ನಾನು ಆಕರ್ಷಕವಾಗಿ ಕಾಣುವ ಮತ್ತೊಂದು ಚಿತ್ರವೆಂದರೆ ಬಾಹುಬಲಿ: ದಿ ಬಿಗಿನಿಂಗ್. ಇದರಲ್ಲಿ ಮಹಿಳೆಯನ್ನು ತೋರಿಸಿದ ರೀತಿ ನಿಜಕ್ಕೂ ಮೆಚ್ಚುವಂತಹದ್ದು. ಚಿತ್ರದ ನಾಯಕಿ ಮರದಿಂದ ಮರಕ್ಕೆ ಜಿಗಿಯುತ್ತಾ ಯೋಧಳಂತೆ ಕಾಣುತ್ತಾಳೆ. ಅವಳನ್ನು ನಾಯಕ ಹಿಂಬಾಲಿಸುವುದು, ಅವಳ ಕೂದಲನ್ನು ಹಿಡಿಯುವಷ್ಟರಲ್ಲಿ ಆಕೆ ಮಾಯವಾಗುವುದು. ಈ ರೀತಿಯಾಗಿ ಪ್ರಣಯವನ್ನು ತೋರಿಸಿದ ಪರಿ ಅದ್ಭುತ. ನಾನು ಇದನ್ನು ಆಕರ್ಷಕವಾಗಿ ಕಾಣುತ್ತೇನೆ. ಇದು ಭಾರತೀಯ ಚಿತ್ರರಂಗದ ಬಹುದೊಡ್ಡ ಸಿನಿಮಾವಾಗಿದೆ" ಎಂದು ಹೇಳಿದ್ದಾರೆ.