ಮಲಯಾಳಂ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಟನೆಯ 'ಕಿಂಗ್ ಆಫ್ ಕೋಥಾ' ಸಿನಿಮಾ ಆಗಸ್ಟ್ 24, ಗುರುವಾರದಂದು ತೆರೆ ಕಂಡಿದೆ. ದುಲ್ಕರ್ ಸಲ್ಮಾನ್ ಅವರ ಕಂಪ್ಲೀಟ್ ಮಾಸ್ ಎಂಟರ್ಟೈನ್ಮೆಂಟ್ ಸಿನಿಮಾ ವೀಕ್ಷಿಸಲು ಪ್ರೇಕ್ಷಕರು ಚಿತ್ರಮಂದಿರಗಳತ್ತ ಮುಗಿಬಿದ್ದಿದ್ದಾರೆ. ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ಚಿತ್ರಕಥೆ ಮತ್ತು ಎಲ್ಲಾ ಕಲಾವಿದರ ನಟನೆ ಮೆಚ್ಚಿ ಕೊಂಡಾಡುತ್ತಿದ್ದಾರೆ. ಕಲೆಕ್ಷನ್ ವಿಚಾರದಲ್ಲೂ ಉತ್ತಮ ಓಟ ಮುಂದುವರೆಸಿದ್ದು, ಬಿಡುಗಡೆಯಾದ ನಾಲ್ಕನೇ ದಿನ ಸುಮಾರು 2 ಕೋಟಿ ರೂಪಾಯಿ ಗಳಿಸಿದೆ.
ಈವರೆಗಿನ ಕಲೆಕ್ಷನ್ ಹೀಗಿದೆ..ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ಪ್ರಕಾರ, ಚಿತ್ರವು ಮೊದಲ ವಾರಾಂತ್ಯದಲ್ಲಿ ಒಟ್ಟು 13.5 ಕೋಟಿ ಗಳಿಸಿದೆ. ಬಿಡುಗಡೆಯಾದ ಮೊದಲ ದಿನ 6.85 ಕೋಟಿ ರೂ. ಸಂಗ್ರಹಿಸಿತ್ತು. ಅದರಲ್ಲಿ ಮಲಯಾಳಂ ಆವೃತ್ತಿಯು 5.6 ಕೋಟಿ ರೂ., ತೆಲುಗು ಮತ್ತು ತಮಿಳು ಭಾಷೆಯಲ್ಲಿ ಕ್ರಮವಾಗಿ 85 ಲಕ್ಷ ಮತ್ತು 40 ಲಕ್ಷ ರೂಪಾಯಿ ಗಳಿಸಿತ್ತು. ಶುಕ್ರವಾರ ಎಲ್ಲಾ ಭಾಷೆಗಳಲ್ಲಿ ಚಿತ್ರವು 2.6 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಶನಿವಾರ 2.5 ಕೋಟಿ ರೂ. ಪಡೆದುಕೊಳ್ಳುವುದರ ಜೊತೆಗೆ ಭಾನುವಾರ ಅಂದಾಜು 2 ಕೋಟಿ ರೂಪಾಯಿ ಗಳಿಸಿದೆ.
ಪ್ರೇಕ್ಷಕರ ಪ್ರತಿಕ್ರಿಯೆ: 'ಕಿಂಗ್ ಆಫ್ ಕೋಥಾ' ವೀಕ್ಷಿಸಿದ ಪ್ರೇಕ್ಷಕರು ಆ್ಯಕ್ಷನ್ ಎಂಟರ್ಟೈನ್ಮೆಂಟ್ ಸಿನಿಮಾ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈಗಾಗಲೇ ಚಿತ್ರ ನೋಡಿರುವ ವೀಕ್ಷಕರು ಚಿತ್ರಕಥೆ ಮತ್ತು ನಟನೆ ಮೆಚ್ಚಿ ಕೊಂಡಾಡುತ್ತಿದ್ದಾರೆ. 'ಕಿಂಗ್ ಆಫ್ ಕೋಥಾ' ವಿಶುವಲ್ಸ್ ಚಿತ್ರದ ಹೈಲೆಟ್ಸ್ ಎಂದು ಬಹುತೇಕರು ಉಲ್ಲೇಖಿಸಿದ್ದಾರೆ. ಚಿತ್ರ ಸಂಗೀತ, ಹಿನ್ನೆಲೆ ಸಂಗೀತ ಅತ್ಯುತ್ತಮ ಅನುಭವ ಕೊಟ್ಟಿದೆ ಎಂದು ಪ್ರೇಕ್ಷಕರು ಹೇಳುತ್ತಿದ್ದಾರೆ.